ದಿಢೀರ್ ಗಾಳಿ ಸಹಿತ ಮಳೆ: ವಾಹನಗಳು ಜಖಂ, ಮನೆಗಳಿಗೆ ನುಗ್ಗಿದ ಚರಂಡಿ ನೀರು
ಶಿವಮೊಗ್ಗ ನಗರದಲ್ಲಿ ಸುರಿದ ದಿಢೀರ್ ಗಾಳಿ ಸಹಿತ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇಂದು ಸಂಜೆ 5 ಗಂಟೆ ಸುಮಾರಿಗೆ ವರುಣ ಆರ್ಭಟ ಶುರುವಾಗಿದೆ. ಗಾಳಿ ಸಹಿತ ಮಳೆಯಾಗಿದ್ದರಿಂದ ಮರಗಳು ನೆಲಕ್ಕುರುಳಿವೆ. ಕೆಲವೆಡೆ ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಇಲ್ಲಿನ ವಿನೋಬ ನಗರದ ವೀರಣ್ಣ ಲೇಔಟ್ನಲ್ಲಿ ತೆಂಗಿನ ಮರ ಬಿದ್ದು, ಮೂರು ದ್ವಿಚಕ್ರವಾಹನಗಳು ಜಖಂಗೊಂಡಿವೆ. ಕೆಇಬಿ ವೃತ್ತದ ಬಳಿ ಗೋಪಾಲ್ ಎಂಬುವವರ ಮನೆ ಮುಂದೇ ನಿಲ್ಲಿಸಿದ್ದ ಮರದ ಮೇಲೆ ಭಾರಿ ಗಾತ್ರ ಮರ ಉರುಳಿ ಬಿದ್ದಿದೆ. ನಗರದೆಲ್ಲೆಡೆ ವಿದ್ಯುತ್ ಸ್ಥಗಿತಗೊಂಡಿದೆ. ನಗರದ ಹೊರವಲಯದ ಅನುಪಿನಕಟ್ಟೆ ಶೆಡ್ ಬಿದ್ದು ಎರಡು ಎತ್ತುಗಳು ಗಾಯಗೊಂಡಿವೆ. ನಗರದ ಹೊಸಮನೆ ಹಾಗೂ ಟಿಪ್ಪು ನಗರಗಳಲ್ಲಿ ಚರಂಡಿ ನೀರು ಮನೆ ಒಳಗೆ ನುಗ್ಗಿದ್ದು, ಹೊರ ಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ.