ಭಾರಿ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಬಾಗಲಕೋಟೆ ರೈತರ ಸ್ಥಿತಿ - ಮುಧೋಳ ಮಳೆ ಸುದ್ದಿ
ಬಾಗಲಕೋಟೆ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ, ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮುಧೋಳ ಪಟ್ಟಣದ ನಗರಸಭೆ ಕಚೇರಿಗೆ ನೀರು ನುಗ್ಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಇನ್ನು ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಮತ್ತೆ ಪ್ರವಾಹ ಭೀತಿ ಸೃಷ್ಟಿಸಿದೆ. ಭಾರಿ ಮಳೆಯಿಂದ 25 ವರ್ಷಗಳ ಹಿಂದೆ ತುಂಬಿದ್ದ ಹಳ್ಳ ಈಗ ಮತ್ತೊಮ್ಮೆ ತುಂಬಿ ಹರಿಯುತ್ತಿದೆ. ರಬಕವಿ ಸಮೀಪ ಜಮೀನುಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ. ಕಳೆದ ಎರಡು ತಿಂಗಳ ಹಿಂದೆ ಕೃಷ್ಣಾ ನದಿಯ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿತ್ತು. ಈಗ ಮತ್ತೊಮ್ಮೆ ಮಳೆಯಿಂದಾಗಿ ತೊಂದರೆ ಉಂಟಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.