ಸಾಂಪ್ರದಾಯಿಕ ಬೆಳೆ ಬೆಳೆದು ಕೈ ಸುಟ್ಟುಕೊಂಡ ರೈತರ ಕೈ ಹಿಡಿದ ಔಷಧಿ ಸಸ್ಯಗಳು - ಹಾವೇರಿ ಔಷಧಿ ಬೆಳೆ
ಸಾಂಪ್ರದಾಯಕ ಬೆಳೆಗಳಿಗೆ ಮಾರು ಹೋಗಿ ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆಗೆ ಬೆಳೆ ಮಾರಿ ನಷ್ಟ ಹೋಗುತ್ತಿರುವ ರೈತರ ನಡುವೆ ಇಲ್ಲೊಬ್ಬ ರೈತರು ವಿವಿಧ ವಾಣಿಜ್ಯ ಬೆಳೆಗಳು, ಔಷಧಿ ಸಸ್ಯಗಳನ್ನು ಬೆಳೆಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಪ್ರವೃತ್ತಿಯಲ್ಲಿ ಕೃಷಿಕರಾಗಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಕದರಮಂಡಲಗಿಯ ಡಿಳ್ಳೆಪ್ಪ ಕುಸಗೂರು, ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುತ್ತಿದ್ದರು. ಇದರಿಂದ ಹೊರ ಬರಲು ಔಷಧಿ ಸಸ್ಯಗಳ ಬೆಳೆಯತ್ತ ಗಮನ ಹರಿಸಿದರು. ತಮ್ಮ ಮೂರು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಶತಾವರಿ ಮತ್ತು ಸಲೇಶಿಯಾ ಎಂಬ ಔಷಧಿ ಸಸ್ಯಗಳನ್ನು ಬೆಳೆಸಿದ್ದಾರೆ. ಜೊತೆಗೆ ಹಲಸು, ಮಹಾಗನಿ, ಜಂಬೂ ನೀರಲೆ, ರಕ್ತಚಂದನ, ಲಕ್ಷ್ಮಣಫಲ, ತೆಂಗು ಹಾಗೂ ನುಗ್ಗೆ ಗಿಡಗಳನ್ನು ಬೆಳೆದಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ.