ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳ ಆರೋಪ: ಡಿಸಿ ಕಚೇರಿ ಎದುರು ಮಹಿಳೆಯರಿಂದ ಪ್ರತಿಭಟನೆ - Harassment of Micro Finance Companies.
ಕೊಡಗು: ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ಹಣ ಪಾವತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಗ್ರಾಮೀಣ ಸ್ವ ಸಹಾಯ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಮಹಿಳೆಯರು ಹಣ ಮರುಪಾವತಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕಿರುಕುಳ ಕೊಡುತ್ತಿರುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಮೊದಲೇ ಅತಿವೃಷ್ಟಿಯಿಂದ ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೇವೆ. ಕಳೆದೆರಡು ವರ್ಷಗಳಿಂದ ಸುರಿಯುತ್ತಿರುವ ಮಳೆಯಿಂದ ಇದ್ದ ಕಾಫಿ ಹಾಗೂ ಕಾಳು ಮೆಣಸು ನಷ್ಟವಾಗಿದೆ. ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಹಣ ಮರುಪಾವತಿಸುವಂತೆ ಹಲವು ಫೈನಾನ್ಸ್ ಕಂಪನಿಗಳು ಪ್ರತಿನಿತ್ಯ ಕಿರುಕುಳ ಕೊಡುತ್ತಿವೆ ಎಂದು ಆರೋಪಿಸಿದರು.