ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರಿಂದ 3 ಕೋಟಿ ದೇಣಿಗೆ - 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸುದ್ದಿ,
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿ ಜಿಲ್ಲೆಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ಸೇರಿಸಿ ಒಟ್ಟು 3 ಕೋಟಿ ರೂ.ಗಳ ದೇಣಿಗೆ ಚೆಕ್ಅನ್ನು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೌಕರರ ಪರವಾಗಿ ಡಿಸಿಗೆ ಚೆಕ್ ಹಸ್ತಾಂತರಿಸಿದರು. ಮೂರು ದಶಕಗಳ ನಂತರ ನಮ್ಮೂರಿನಲ್ಲಿ ಕನ್ನಡದ ಮೇರು ಹಬ್ಬ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನಿರ್ದೇಶನದಂತೆ ಮತ್ತು ನೌಕರ ಬಾಂಧವರ ಒಪ್ಪಿಗೆ ಪಡೆದು ನುಡಿ ಸಮ್ಮೇಳನಕ್ಕೆ ಜಿಲ್ಲೆಯ ನೌಕರರ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದು ಲೆಂಗಟಿ ತಿಳಿಸಿದರು.