ರೈತರನ್ನು ದಲ್ಲಾಳಿ ಎಂದ ಸಂಸದ ಮುನಿಸ್ವಾಮಿ; ರೈತರಿಂದ ಪ್ರತಿಭಟನೆ - Chinthamani protest news
ಪಂಜಾಬ್ ರೈತರ ವಿರುದ್ಧ ಸಂಸದ ಎಸ್ ಮುನಿಸ್ವಾಮಿ ಕಳೆದ ದಿನವಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದು ಇಂದು ರೈತ ಸಂಘಟನೆಗಳು ಬೀದಿಗಿಳಿದು ರೈತ ವಿರೋಧಿ ಹೇಳಿಕೆಯನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಕಳೆದ ದಿನ ಚಿಂತಾಮಣಿ ನಗರಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿಯ ಕಿಸಾನ್ ಸನ್ಮಾನ್ ಯೋಜನೆಯ ಬಗ್ಗೆ ವರದಿಗಾರರೊಂದಿಗೆ ಮಾತನಾಡುವ ಭರದಲ್ಲಿ ಸಮಸ್ಯೆಯೊಂದನ್ನು ಮೈಮೇಲೆ ಎಳೆದುಕೊಂಡ ಸಂಸದರು, ಪಂಜಾಬ್ನಲ್ಲಿ ಹೋರಾಟ ಮಾಡುತ್ತಿರುವರಾರೂ ರೈತರಲ್ಲ, ಅವರೆಲ್ಲ ದಲ್ಲಾಳಿಗಳು, ನಕಲಿ ರೈತರು ಎಂದು ಹೇಳಿದ್ದರು. ಇಂದು ಸಂಸದರ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ರೊಚ್ಚಿಗೆದ್ದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬೀದಿಗಿಳಿದು ಬಿಜೆಪಿ ಸರ್ಕಾರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಸದರು ಹೇಳಿಕೆಯನ್ನು ವಾಪಸ್ಸು ತೆಗೆದುಕೊಳ್ಳದೇ ಹೋದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.