ತಲಕಾವೇರಿಯಲ್ಲಿ ನಿತ್ಯ ಪೂಜೆ ಮತ್ತೆ ಆರಂಭ: ಕಾವೇರಮ್ಮನ ದರ್ಶನ ಪಡೆದ ಸಚಿವ ಸೋಮಣ್ಣ - ಸಚಿವ ವಿ.ಸೋಮಣ್ಣ
ತಲಕಾವೇರಿ (ಕೊಡಗು): ತಲಕಾವೇರಿಯಲ್ಲಿ ಸಂಭವಿಸಿದ ದುರ್ಘಟನೆಯ ಹತ್ತು ದಿನಗಳ ಬಳಿಕ ಕಾವೇರಮ್ಮನ ನಿತ್ಯ ಪೂಜೆಗಳು ನೆರವೇರಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕಾವೇರಮ್ಮ, ಅಗಸ್ತೇಶ್ವರ ಹಾಗೂ ಗಣಪತಿಯ ದರ್ಶನ ಪಡೆದರು. ನಂತರ ಜನಪ್ರತಿನಿಧಿಗಳ ಹೆಸರಲ್ಲಿ ಅರ್ಚನೆ ನಡೆಯಿತು. ಬ್ರಹ್ಮಕುಂಡಿಕೆ ಬಳಿ ಎಂದಿನಂತೆ ಪೂಜೆ ನೆರವೇರಿಸಿ ನೈವೇದ್ಯ ಮತ್ತು ಪ್ರಸಾದ ನೀಡಲಾಯಿತು. ದೇವಾಲಯದ ಮುಖ್ಯಸ್ಥರಿಂದ ತಲಕಾವೇರಿಯ ಇತಿಹಾಸ, ಕಾವೇರಿ ಉಗಮದ ಬಗ್ಗೆ ಸಚಿವರು ಮಾಹಿತಿ ಪಡೆದರು. ಬಳಿಕ ಗಜಗಿರಿ ಬೆಟ್ಟದ ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕಿಸಿದರು. ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್, ಎಸ್ಪಿ ಕ್ಷಮಾ ಮಿಶ್ರಾ ಇದ್ದರು.