ಕೋಟೆನಾಡಿನ ಅಯ್ಯಪ್ಪ ದೇಗುಲಕ್ಕೆ ಹರಿದು ಬರುತ್ತಿದೆ ಭಕ್ತಸಾಗರ
ಚಿತ್ರದುರ್ಗ: ಮಿನಿ ಅಯ್ಯಪ್ಪಸ್ವಾಮಿ ದೇಗುಲವೆಂದೇ ಖ್ಯಾತಿ ಪಡೆದ ಕೋಟೆನಾಡಿನ ಅಯ್ಯಪ್ಪ ದೇಗುಲಕ್ಕೆ ಮಕರ ಸಂಕ್ರಮಣ ಹಬ್ಬದ ನಿಮಿತ್ತ ನೂರಾರು ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಹೊತ್ತು ಬಂದು ಅಯ್ಯಪ್ಪನ ದರ್ಶನ ಪಡೆದರು. ಕೊರೊನಾ ಭೀತಿಯಿಂದ ಕೇರಳದ ಅಯ್ಯಪ್ಪ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾದ ಹಿನ್ನೆಲೆ, ರಾಜ್ಯದ ಮೂಲೆ ಮೂಲೆಗಳಿಂದ ಮಾಲಾಧಾರಿಗಳು 41 ದಿನಗಳ ವ್ರತ ಸಮಾಪ್ತಿಗೊಳಿಸಲು ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಬರಿಮಲೈ ಅಯ್ಯಪ್ಪ ದೇಗುಲ ಮಾದರಿಯಲ್ಲೇ ಇಲ್ಲಿಯೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಮಕರಜ್ಯೋತಿ ಕಾಣಲಾಗದ ಅಯ್ಯಪ್ಪ ಮಾಲಾಧಾರಿಗಳು ಕೋಟೆನಾಡಿನ ಮಿನಿ ಅಯ್ಯಪ್ಪ ದೇಗುಲದಲ್ಲಿ ತಮ್ಮ ಪೂಜೆ ಪೂರ್ಣಗೊಳಿಸಿದರು.