ಮಲೆನಾಡಿನ ಮಹಾಮಳೆಗೆ ಕುಸಿದ ದೇವಗಂಗೆ ತಡೆಗೋಡೆ: ಪರಿಸರವಾದಿಗಳ ಆತಂಕ - ದೇವಗಂಗೆ ಕೊಳದ ತಡೆಗೋಡೆ ಕುಸಿತ
ಶಿವಮೊಗ್ಗ: ಜಿಲ್ಲೆಯ ನಗರ ಸಮೀಪವಿರುವ ದೇವಗಂಗೆ ಕೊಳದ ತಡೆಗೋಡೆ ಕುಸಿತಗೊಂಡಿರುವುದು ಪರಿಸರಾಸಕ್ತರಿಗೆ ಆತಂಕವನ್ನುಂಟು ಮಾಡಿದೆ. ಕೆಳದಿ ಶಿವಪ್ಪ ನಾಯಕ ತನ್ನ ರಾಣಿಯರಿಗಾಗಿ ಈ ಕೊಳವನ್ನು ನಿರ್ಮಿಸಿದ್ದು, ಸುಮಾರು 500 ವರ್ಷಗಳ ಇತಿಹಾಸ ಹೊಂದಿದೆ. ದೇವಗಂಗೆಯಲ್ಲಿ 10 ಅಡಿ ಅಗಲ ಹಾಗೂ 20 ಅಡಿ ಉದ್ದದ ಈ ಮೂರು ಕೆರೆಗಳು ಇತಿಹಾಸವನ್ನು ಸಾರುತ್ತಿದ್ದು, ಪುರಾತತ್ವ ಇಲಾಖೆ ಈ ಸ್ಥಳದ ರಕ್ಷಣೆಯಲ್ಲಿ ಪ್ರವೃತ್ತವಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ತಡೆಗೋಡೆ ಕುಸಿತಗೊಂಡಿದ್ದು, ಅತ್ಯಂತ ಸುಂದರ ಕೆತ್ತನೆ ಹಾಗೂ ಕಮಲಕಾರವಾಗಿ ಇರುವ ಅಪರೂಪದ ದೇವಗಂಗೆ ಕೊಳವನ್ನು ಉಳಿಸಬೇಕು ಎಂಬುದು ಪರಿಸರವಾದಿಗಳ ಹಾಗೂ ಸ್ಥಳೀಯರ ಆಶಯವಾಗಿದೆ.