ಟ್ರಾಫಿಕ್ ರೂಲ್ಸ್ ಬ್ರೇಕ್ ದಂಡ ಕಡಿಮೆ ಮಾಡುವ ವಿಚಾರ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದೇನು? - ಟ್ರಾಫಿಕ್ ದಂಡ
ಹೊಸ ದಂಡದ ಇಳಿಕೆ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಟ್ರಾಫಿಕ್ ದಂಡ ಕಡಿಮೆ ಮಾಡುವ ಬಗ್ಗೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇದುವರೆಗೆ ಸಾರಿಗೆ ಇಲಾಖೆಯಿಂದ ಯಾವುದೇ ಅದೇಶ ಬಂದಿಲ್ಲ. ಸೆಪ್ಟೆಂಬರ್ 3ರಿಂದ ಹೊಸ ದಂಡ ನೀತಿ ಅಧಿಸೂಚನೆ ಬಂದಿದೆ. ಅದರ ಅನ್ವಯವಾಗಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತಿದ್ದಾರೆ. ದಂಡ ಕಡಿಮೆ ಮಾಡುವ ಬಗ್ಗೆ ಹೊಸ ಅಧಿಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಅದನ್ನ ಪಾಲಿಸುತ್ತೇವೆ. ಸಚಿವರು ಮಾಧ್ಯಮಗಳಿಗೆ ಹೇಳಿರಬಹುದು. ಅದರೆ ನಮಗೆ ಯಾವುದೇ ಅದೇಶ ಬಂದಿಲ್ಲ. ಸದ್ಯ ಸಾರ್ವಜನಿಕರ ಜೊತೆ ಮಾನವೀಯತೆಯಿಂದ ವರ್ತಿಸಲು ಸೂಚನೆ ಬಂದಿದೆ. ಅದರಂತೆ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.