ಮಲಪ್ರಭಾ ನದಿ ದಂಡೆಯಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಗದಗ: ಜಿಲ್ಲೆಯ ಮಲಪ್ರಭಾ ನದಿ ದಡದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ ವಾಗಿದೆ. ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ಬಳಿ ಮಲಪ್ರಭಾ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜಮೀನಿಗೆ ಹೋಗಲು ಗ್ರಾಮಸ್ಥರು ಭಯಪಡುವಂತಾಗಿದೆ. ಗ್ರಾಮಸ್ಥರು ರೋಣ ಅರಣ್ಯ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮೊಸಳೆ ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ ಅರಣ್ಯ ಅಧಿಕಾರಿಗಳು ಸಹ ಇಂದು ಮೊಸಳೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಇತ್ತ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ನದಿ ಕಡೆ ಯಾರೂ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಇದೇ ಭಾಗದ ಹೊಳೆಯಾಲೂರು ಗ್ರಾಮದ ಪಕ್ಕ ಮೊಸಳೆ ಕಂಡುಬಂದಿತ್ತು, ಮೂರು ದಿನಗಳ ನಂತರ ಮೊಸಳೆ ನಿಗೂಢವಾಗಿ ಸಾವನ್ನಪ್ಪಿತ್ತು.