ಲಿಂಗಸುಗೂರು ಮಾರುಕಟ್ಟೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ತಂಡೋಪತಂಡವಾಗಿ ವ್ಯಾಪಾರಕ್ಕಿಳಿದ ಜನತೆ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 1351 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೂ ಕೂಡ ಕೋವಿಡ್ ಅಟ್ಟಹಾಸಕ್ಕೆ ಮಣಿಯದ ಜನರು ಮಾರುಕಟ್ಟೆಯಲ್ಲಿ ತಂಡೋಪತಂಡವಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೇಲಿಂದ ಮೇಲೆ ಹೊರಡಿಸುತ್ತಿರುವ ದ್ವಂದ್ವ ಆದೇಶಗಳ ಅನುಷ್ಠಾನ ಸ್ಥಳೀಯ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. 10 ಗಂಟೆಯ ನಂತರ ಹಿಂಬಾಗಿಲು ವ್ಯವಹಾರ ನಡೆಯುತ್ತದೆ. ಮಾರುಕಟ್ಟೆಗೆ ಬರುವ ಜನರು, ವ್ಯಾಪಾರಿಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇಂದು ನಡೆದ ಶನಿವಾರ ಸಂತೆಯಲ್ಲಿ ಭಾಗಿಯಾಗಿದ್ದಾರೆ. ಆದರೂ ಕೂಡ ತಾಲೂಕು ಆಡಳಿತ ಮಾತ್ರ ಕೈಚೆಲ್ಲಿ ಕುಳಿತಿರುವುದು ವಿಪರ್ಯಾಸವೇ ಸರಿ.