ದಸರಾ ಆಹಾರ ಮೇಳದಲ್ಲಿ ಮೊಟ್ಟೆ ತಿನ್ನುವ ಸ್ಪರ್ಧೆ: 30 ಸೆಕೆಂಡ್ನಲ್ಲಿ 6 ಮೊಟ್ಟೆ ತಿಂದ ಭೂಪ!
ಒಂದು ಕಡೆ ಗಬಗಬನೆ ಮೊಟ್ಟೆ ತಿನ್ನುವ ಸ್ಪರ್ಧಿಗಳು, ಇನ್ನೊಂದು ಕಡೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಿರುವ ಪ್ರೇಕ್ಷಕರು. ಮೈಸೂರು ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು. ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಇಂದು ಯುವಕರಿಗೆ ಮೊಟ್ಟೆ ತಿನ್ನುವ ಸ್ಪರ್ಧೆಯನ್ನು ಆಹಾರ ಮೇಳ ಉಪ ಸಮಿತಿಯಿಂದ ಆಯೋಜಿಸಲಾಗಿತ್ತು. ಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ 10 ಯುವಕರು ಭಾಗವಹಿಸಿ, ಬಹುಮಾನ ಪಡೆಯುವ ಉದ್ದೇಶದಿಂದ ನಾ ಮುಂದು, ತಾ ಮುಂದು ಎಂದು ಮೊಟ್ಟೆ ತಿಂದರು. ಒಂದು ನಿಮಿಷದಲ್ಲಿ 6 ಮೊಟ್ಟೆಗಳನ್ನು ತಿನ್ನುವ ಅವಕಾಶ ನೀಡಿದ್ದು, 6 ಮೊಟ್ಟೆಗಳನ್ನು 30 ಸೆಕಂಡ್ನಲ್ಲಿ ತಿಂದು ಮುಗಿಸಿ ಕೌಶಿಕ್ ಮೊದಲನೇ ಬಹುಮಾನ ಪಡೆದರೆ, 36 ಸೆಕೆಂಡ್ನಲ್ಲಿ 6 ಮೊಟ್ಟೆ ತಿಂದು ಮಂಜುನಾಥ್ ದ್ವಿತೀಯ ಸ್ಥಾನ ಪಡೆದರು.