ಬಲೆ ಬಿಗಿದು ನರಳಾಡುತ್ತಿದ್ದ ಬೃಹತ್ ಗಾತ್ರದ ನಾಗರಹಾವು ರಕ್ಷಣೆ - ಚಿಕ್ಕಮಗಳೂರು ಸುದ್ದಿ
ಚಿಕ್ಕಮಗಳೂರು : ಕುತ್ತಿಗೆಗೆ ಬಲೆ ಬಿಗಿದು ಸಾವು ಬದುಕಿನ ಮಧ್ಯೆ ನರಳಾಟ ನಡೆಸುತ್ತಿದ್ದ ಬೃಹತ್ ಗಾತ್ರದ ನಾಗರಹಾವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ನಾಗರಹಾವು ಬೇಲಿಯಲ್ಲಿ ಸಾಗುವ ವೇಳೆ ಅಲ್ಲಿದ್ದ ಬಲೆ ಕುತ್ತಿಗೆಗೆ ಬಿಗಿದು ಈ ಹಾವು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿತ್ತು. ಈ ದೃಶ್ಯವನ್ನು ನೋಡಿದ ಸ್ಥಳೀಯರು ಕೂಡಲೇ ಉರಗ ತಜ್ಞ ರಿಜ್ವಾನ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೇ ಆಗಮಿಸಿದ ರಿಜ್ವಾನ್ 15 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ಮಾಡಿ ನಾಗರಹಾವನ್ನು ಬಿಡಿಸಿ ಅದರ ರಕ್ಷಣೆ ಮಾಡಿ, ಮುಖ್ಯ ರಸ್ತೆಗೆ ತಂದಿದ್ದಾರೆ. ನಂತರ ಪೈಪ್ನ ಸಹಾಯದಿಂದ ಹಾವಿನ ಕುತ್ತಿಗೆಗೆ ಬಿಗಿದಿದ್ದ ಬಲೆಯ ದಾರವನ್ನು ಕತ್ತರಿಯ ಮೂಲಕ ನಿಧಾನವಾಗಿ ಬಿಡಿಸಿದ್ದಾರೆ. ಈ ವೇಳೆ ನಾಗರಹಾವು ರಿಜ್ವಾನ್ ಅವರ ಮೇಲೆ ಎರಡು ಮೂರು ಬಾರಿ ದಾಳಿ ಮಾಡುವ ಪ್ರಯತ್ನ ನಡೆಸಿದೆ. ನಂತರ ಉರಗ ತಜ್ಞ ರಿಜ್ವಾನ್ ಸ್ಥಳೀಯ ಅರಣ್ಯಕ್ಕೆ ಈ ನಾಗರಹಾವನ್ನು ಬಿಟ್ಟು ಬಂದಿದ್ದಾರೆ.