ಹಥ್ರಾಸ್ ಗ್ಯಾಂಗ್ ರೇಪ್ ಖಂಡಿಸಿ ಕಲಬುರಗಿಯಲ್ಲಿ ಮೊಂಬತ್ತಿ ಮೆರವಣಿಗೆ - Kalburgi
ಕಲಬುರಗಿ: ಯುಪಿಯಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು. ರಿಪಬ್ಲಿಕ್ ಯೂಥ್ ಫೆಡರೇಶನ್ ಹಾಗೂ ಎಪಿಐ ಪಕ್ಷದ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಮೇಣದಬತ್ತಿ ಬೆಳಗಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೈತಿಕ ಹೊಣೆ ಹೊತ್ತು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಹತ್ರಾಸ್ ಡಿಸಿ, ಎಸ್ಪಿ, ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲರಾದ ವೈದ್ಯರು ಸೇರಿ ಘಟನೆಯಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿದ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸುವುದು ಸೇರಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಲಾಯಿತು.