ಚುನಾವಣೆ ಬಂದ್ರೆ ಬಿಜೆಪಿಗೆ ಕಸ್ತೂರಿ ರಂಗನ್ ವರದಿ ನೆನಪಾಗುತ್ತದೆ : ರಮೇಶ್ ಹೆಗ್ಡೆ
ಶಿವಮೊಗ್ಗ : ಬಿಜೆಪಿಯವರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಕಸ್ತೂರಿ ರಂಗನ್ ವರದಿ ನೆನಪಿಗೆ ಬರುತ್ತದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಯಾವುದೇ ಕಾರಣಕ್ಕೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲ್ಲ ಎಂದು ಬಿಜೆಪಿ ಪಕ್ಷ ನೀಡಿದ ಭರವಸೆ ಈಗ ಸುಳ್ಳಾಗಿದೆ. ಅಧಿಕಾರಕ್ಕೆ ಬಂದ ನಂತರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು 2014 ಹಾಗೂ 2018ರಲ್ಲಿ ರಾಷ್ಟ್ರೀಯ ಹಸಿರು ಪೀಠಕ್ಕೆ ಡಾ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಲಿಖಿತ ಹೇಳಿಕೆ ಹಾಗೂ ಪ್ರಮಾಣ ಪತ್ರ ಸಲ್ಲಿಸಿದರು. ಅದರ ಸಲುವಾಗಿ ಕಳೆದ ಅಕ್ಟೋಬರ್ನಲ್ಲಿ ಡಿಸೆಂಬರ್ 31ರೊಳಗಾಗಿ ಡಾ.ಕಸ್ತೂರಿ ರಂಗನ್ ವರದಿಯನ್ನು ಅಂತಿಮಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಇದರಿಂದಾಗಿ ಮಲೆನಾಡಿನ ಜನರಿಗೆ ಆತಂಕ ಸೃಷ್ಟಿಯಾಗಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಸಂಚಾಲಕರು ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಹೇಳಿದರು.