ಭಟ್ಕಳ ಹೆಬಳೆ ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರೆಯಲ್ಲಿ ಹರಕೆ ತೀರಿಸಿದ ಭಕ್ತರು - ಹೆಬಳೆ ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರಾ ಮಹೋತ್ಸವ
ಭಟ್ಕಳ: ಮಕರ ಸಂಕ್ರಾಂತಿಯಂದು ಆರಂಭವಾಗಿದ್ದ ತಾಲೂಕಿನ ಹೆಬಳೆ ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ದೇವರಿಗೆ ಶೆಡಬರಿ ಜಟಕಾ ಮಹಾಸತಿ ದೇವಿಗೆ ಹಾಗೂ ಪರಿವಾರ ದೇವರಿಗೆ ಸಿಂಗಾರದ ಹೂವಿನ ವಿಶೇಷ ಪೂಜೆ, ಕೈ ಕಾರ್ಯಗಳನ್ನು ನೆರವೇರಿಸಿದರು. ಭಕ್ತರು ಶೇಡಿ ಮರವನ್ನು ಏರುವ ಹರಕೆ ಈ ಜಾತ್ರೆಯ ವಿಶೇಷವಾಗಿದೆ. ತಮ್ಮ ಕಷ್ಟ ಕಾಲದಲ್ಲಿ ಮಹಾಸತಿದೇವಿ ಬಳಿ ಶೇಡಿಮರ ಏರುವುದಾಗಿ ಹರಕೆ ಮಾಡಿಕೊಂಡರೆ ಕಷ್ಟಗಳಿಗೆ ಪರಿಹಾರ ಸಿಕ್ಕು ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಹರಕೆ, ಪೂಜೆಗಳನ್ನು ದೇವಿಗೆ ಸಲ್ಲಿಸಿದರು.