ಶಾಲೆ-ಕಾಲೇಜುಗಳು ಪುನಾರಂಭ.. ಸುಳ್ಯ, ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪರಿಶೀಲನೆ - ಜನವರಿ 1 ರಿಂದ ಕರ್ನಾಟಕದಲ್ಲಿ ಶಾಲೆ ಆರಂಭ
ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಸೂಚನೆಯಂತೆ ಇಂದಿನಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಾಗೂ ವಿದ್ಯಾಗಮ ತರಗತಿಗಳು ಆರಂಭವಾಗಿವೆ. ಈ ಹಿನ್ನೆಲೆ ಸುಳ್ಯ, ಕಡಬ ತಾಲೂಕುಗಳಲ್ಲಿ ಕೂಡ ಶಾಲಾ - ಕಾಲೇಜುಗಳು ಆರಂಭವಾಗಿವೆ. ಶೇ.80% ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಹಾಜರಾಗಿದ್ದಾರೆ. ಎಲ್ಲಾ ಶಾಲೆಗಳಲ್ಲಿ ಬ್ಯಾಂಡ್, ಆರತಿ ಬೆಳಗುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು. ತರಗತಿ ಆರಂಭಕ್ಕೂ ಮುಂಚೆ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಾಗೂ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮೊದಲು ಅವರ ತಾಪಮಾನ ಪರೀಕ್ಷಿಸಿ ತರಗತಿಗೆ ಪ್ರವೇಶ ನೀಡಲಾಗಿದೆ. ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲಾ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.