ಆದಷ್ಟು ಬೇಗ ಎಲ್ಲ ಮೀಸಲಾತಿ ಬೇಡಿಕೆಗಳ ಈಡೇರಿಕೆಗೆ ಕ್ರಮ: ಯತ್ನಾಳ್ ಪ್ರಶ್ನೆಗೆ ಬೊಮ್ಮಾಯಿ ಉತ್ತರ
ಪಂಚಮಸಾಲಿ ಸಮಾಜವನ್ನು 3ಬಿ ವರ್ಗದಿಂದ ಹಿಂದುಳಿದ ವರ್ಗಕ್ಕೆ ಸೇರಿಸಿ ಮೀಸಲಾತಿ ಹೆಚ್ಚಿಸುವ ಕುರಿತು ಇಂದು ಸದನದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿದ್ರು. ಕರ್ನಾಟಕದಲ್ಲಿ ನಾವು ಶೇ. 32 ಮೀಸಲಾತಿ ನೀಡಿದ್ದರೂ ಇಲ್ಲಿವರೆಗೂ ಯಾರು ಹಿಂದುಳಿದ ವರ್ಗಕ್ಕೆ ಸೇರಿಲ್ಲವೋ ಆ ಸಮಾಜ ಈಗ ಪುರಾವೆ ಸಮೇತ ಬಂದು ಮೀಸಲಾತಿ ಕೇಳುತ್ತಿದೆ. ಇಂದ್ರಾ ಸಹಾನಿ ಕೇಸ್ನಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆ ಎಲ್ಲಾ ರಾಜ್ಯಗಳು ಶೇ. 50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ನೀಡುವಂತಿಲ್ಲ. ಆದರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೀಸಲಾತಿ ಪ್ರಮಾಣ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಕುರಿತಂತೆ ಅಭಿಪ್ರಾಯ ತಿಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚಿಸಿದೆ. ಇನ್ನು ಪಂಚಮಸಾಲಿ ಸಮಾಜ ಈಗಾಗಲೇ 3ಬಿ ವರ್ಗದಲ್ಲಿದ್ದು, ಸದ್ಯ 2ಎಗೆ ಸೇರಿಸುವಂತೆ ಒತ್ತಾಯಿಸಿದೆ. ಆದರೆ ಈ ಕುರಿತು ಸಮಗ್ರ ಅಧ್ಯಯನ, ಹಾಗೂ ಅಂಕಿ- ಅಂಶಗಳ ಸಂಗ್ರಹಣೆ ಮಾಡಲು ಸಮಯಾವಕಾಶ ಬೇಕು. ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವ ಕುರಿತಂತೆ ಈ ಹಿಂದುಳಿದ ವರ್ಗಗಳ ಕಮಿಷನ್ಗೆ ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದುಳಿದ ವರ್ಗಗಳ ಕಮಿಷನ್ಗೆ ಶಿಫಾರಸು ಮಾಡದೇ ಹಿಂದುಳಿದ ವರ್ಗಕ್ಕೆ ಸೇರಿಸಲ್ಪಟ್ಟ ಸಮಾಜಗಳ ಕುರಿತು ಮಾಹಿತಿ ನೀಡಿ ಎಂದರು. ಈ ವೇಳೆ ಸ್ವಲ್ಪ ಕಾಲಾವಕಾಶ ನೀಡುವಂತೆ ಗೃಹ ಸಚಿವರು ಮನವಿ ಮಾಡಿದರು. ಅಂತಿಮವಾಗಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ಶೀಘ್ರ ಅಂದರೆ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಆದರೆ ಇದರಿಂದ ಯತ್ನಾಳ್ ಸಮಾಧಾನಗೊಳ್ಳಲಿಲ್ಲ.