ಬನ್ನೇರುಘಟ್ಟ ಉದ್ಯಾನವನದಲ್ಲಿ ಆನೆಗಳ ಉಳಿವಿಗಾಗಿ ಜಾಗೃತಿ ದಿನಾಚರಣೆ
ಆನೇಕಲ್: ಅಳಿವಿನಂಚಿನಲ್ಲಿರುವ ಆನೆಗಳ ಬಗ್ಗೆ ಜಾಗೃತಿ ಮೂಡಿಸಿ ಸಂರಕ್ಷಿಸಲು "ವಿಶ್ವ ಆನೆ ದಿನಾಚರಣೆ"ಯನ್ನು ಆಗಸ್ಟ್ 12ರಂದು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬನ್ನೇರುಘಟ್ಟ ಉದ್ಯಾನವನದ ರೀಟಾ ಎಂಬ ಹೆಣ್ಣಾನೆಯನ್ನು ದುಬೈನಲ್ಲಿ ನೆಲೆಸಿರುವ ಅಮಿತ್ ನಾರಂಗ್ ಎಂಬವರು ದತ್ತು ಪಡೆದಿದ್ದಾರೆ. ಈ ಮೂಲಕ ಮಾದರಿಯಾಗಿದ್ದಾರೆ ಎಂದು ಇ.ಡಿ ವನಶ್ರೀ ಬಿಪಿನ್ ಸಿಂಗ್ ಹರ್ಷ ವ್ಯಕ್ತಪಡಿಸಿದರು. ವಿಶ್ವ ಆನೆ ದಿನಾಚರಣೆಯ ಭಾಗವಾಗಿ "ಮೃಗಾಲಯಕ್ಕೆ ಶ್ರಮದಾನ" ಎಂಬ ಕಾರ್ಯಕ್ರಮ ಪ್ರಾರಂಭಿಸಿದ್ದು, ಇದರಲ್ಲಿ ನಾಗರಿಕರು ಮತ್ತು ವನ್ಯಜೀವಿ ಉತ್ಸಾಹಿಗಳು ಮೇವು ಕೊಯ್ಲಿನ ರೂಪದಲ್ಲಿ ತಮ್ಮ ಸೇವೆಯನ್ನು ಒದಗಿಸಿದ್ದಾರೆ. ಕಟಾವು ಮಾಡಿದ ಮೇವನ್ನು ಮಾವುತರು ಆನೆಗಳಿಗೆ ನೀಡಿದ್ದಾರೆ. ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜ್ನ 55 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.