ಇಂತಹ ಮಗನನ್ನು ಪಡೆದ ನಾನೇ ಧನ್ಯ: ಅಶೋಕ ಗಸ್ತಿ ತಾಯಿ - Rajya Sabha polls
ಲಿಂಗಸೂರು: ಕಲ್ಯಾಣ ಕರ್ನಾಟಕ ಪ್ರದೇಶದಿಂದ ಅತ್ಯಂತ ಹಿಂದುಳಿದ ಕ್ಷೌರಿಕ (ಸವಿತಾ) ಸಮಾಜದ ಲಿಂಗಸುಗೂರಿನ ಅಶೋಕ ಗಸ್ತಿ ಅವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿರುವುದು ಕುಟುಂಬಸ್ಥರಲ್ಲಿ ಹರ್ಷ ಮೂಡಿಸಿದೆ. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿಸಿಬಿ ಮಹಾವಿದ್ಯಾಲಯದಿಂದ ಪದವಿ ಪಡೆದು ಹೋರಾಟದ ಮೂಲಕ ಕಟ್ಟಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ರಿಯಾಶೀಲ ಕಾರ್ಯಕರ್ತ ಆಗಿದ್ದ ಅವರ ಆಯ್ಕೆಯನ್ನು ಅವರ ತಾಯಿ ವೆಂಕಮ್ಮ ಸೇರಿದಂತೆ ಸ್ನೇಹಿತ ವರ್ಗ ಕೂಡ ಸ್ವಾಗತಿಸಿದೆ. ಕ್ಷೌರಿಕ ವೃತ್ತಿಯಲ್ಲಿ ಸಾಧ್ಯವಾದಷ್ಟು ಶಿಕ್ಷಣ ಕೊಡಿಸಿದೆವು. ವಿದ್ಯಾವಂತರಾಗಿ ಮೋದಿ ಅವರ ಜೊತೆ ಕೂರುವಂತಹ ಸ್ಥಾನಮಾನಕ್ಕೆ ಏರಿದ್ದು ಖುಷಿ ತಂದಿದೆ. ಇಂತಹ ಮಗನನ್ನು ಪಡೆದ ನಾನೇ ಧನ್ಯ ಎಂದು ವೆಂಕಮ್ಮ ಕಣ್ಣಂಚಲ್ಲಿ ನೀರು ತುಂಬಿಕೊಂಡರು.