ಸ್ನೇಹಿತ ಡಿಸಿಪಿ ದೇವರಾಜ್ ಹುಟ್ಟೂರಿನಲ್ಲಿ ಕಿಚ್ಚ; ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಸುದೀಪ್ - ಬೆಂಗಳೂರು ದಕ್ಷಿಣ ವಲಯ ಡಿಸಿಪಿ ದೇವರಾಜ್
ಕೋಲಾರ: ತಾಲ್ಲೂಕು ಕೋರಗೊಂಡಹಳ್ಳಿ ಗ್ರಾಮದ ಪುರಾತನ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಖ್ಯಾತ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ತಮ್ಮ ಸ್ನೇಹಿತ ಹಾಗೂ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ದೇವರಾಜ್ ಅವರ ಹುಟ್ಟೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್, ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಕೆಲ ಕಾಲ ಇದ್ದು ಅಭಿಮಾನಿಗಳತ್ತ ಕೈಬೀಸಿ ಹೊರಟರು. ಇನ್ನು ಸುದೀಪ್ ಬರುವ ವಿಚಾರ ತಿಳಿದು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದಿಚುಂಚನಗಿರಿ ಪೀಠಾಧಿಪತಿಯಾದ ಶ್ರೀಶ್ರೀ ನಿರ್ಮಲಾನಂದ ಸ್ವಾಮಿಗಳು ಪ್ರತಿಷ್ಠಾಪಿತ ಕಾಶಿ ವಿಶ್ವೇಶ್ವರ ಸ್ವಾಮಿ ಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾಜಿ ಸಚಿವ ಚಲುವರಾಯ ಸ್ವಾಮಿ, ವರ್ತೂರು ಪ್ರಕಾಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.