ಮತದಾನ ಪ್ರಮಾಣದಲ್ಲಿ ಭಾರೀ ಇಳಿಕೆ: ಪ್ರಚಾರಕ್ಕೆ ಬಂದಷ್ಟು ಜನ ಮತದಾನಕ್ಕೆ ಬರಲಿಲ್ಲವೇಕೆ? - ಮತದಾನ ಪ್ರಮಾಣ 2020
ಬೆಂಗಳೂರು: ನಿರೀಕ್ಷೆಯಂತೆ ಈ ಬಾರಿಯೂ ಪ್ರಜ್ಞಾವಂತ ಜನರು ಮತದಾನಕ್ಕೆ ಕೈ ಕೊಟ್ಟಿದ್ದಾರೆ. ಆರ್ಆರ್ ನಗರ ವಿಧಾನಸಭೆ ಉಪ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಅರ್ಧದಷ್ಟು ಮತದಾರರು ಕೂಡ ಮತಗಟ್ಟೆಯತ್ತ ಆಗಮಿಸಿಲ್ಲ. ಕಳೆದ ಕೆಲ ದಿನಗಳಿಂದ ಬಹು ಚರ್ಚೆಗೆ ಪಾತ್ರವಾಗಿದ್ದ ವಿಧಾನಸಭೆ ಉಪ ಚುನಾವಣೆ ರಾಜಕೀಯ ನಾಯಕರಿಗೆ ಎಷ್ಟು ಮುಖ್ಯವಾಗಿದೆಯೋ ಮತದಾರರಿಗೆ ಅಷ್ಟೇ ನಗಣ್ಯವಾಗಿ ಹೋಗಿದೆ ಎಂಬುದು ಸಾಬೀತಾಗಿದೆ. ಎರಡು ರಾಷ್ಟ್ರೀಯ ಪಕ್ಷ ಹಾಗೂ ಒಂದು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು 15 ದಿನಗಳಿಂದ ನಡೆಸಿದ ಪ್ರಚಾರದ ಕಾರ್ಯಕ್ಕೆ ಜನರಿಂದ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ. ಪ್ರಚಾರಕ್ಕೆ ತೆರಳಿದ ಸಂದರ್ಭ ಕಂಡ ಅಪಾರ ಕಾರ್ಯಕರ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಮತಗಟ್ಟೆಗೆ ಕರೆ ತರುವಲ್ಲಿ ಸಫಲವಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.