ಬಡವ್ರಿಗೆ ಉಪಯೋಗವಾಗುತ್ತೋ 10 ಎಕರೆ ನಾನೇ ಬಿಟ್ಟುಕೊಡ್ತೀನಿ: ಜಮೀನು ವಿವಾದ ವಿಚಾರವಾಗಿ ಯಶ್ ಹೇಳಿಕೆ - ಪೊಲೀಸ್ ಠಾಣೆಗೆ ಯಶ್ ಭೇಟಿ
ಹಾಸನದಲ್ಲಿ ಜಮೀನು ವಿವಾದ ವಿಚಾರದಲ್ಲಿ ಯಶ್ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದ ಕಾರಣ, ರಾಕಿಂಗ್ ಸ್ಟಾರ್ ಯಶ್ ಇಂದು ಹಾಸನದ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಜಮೀನು ತೆಗೆದುಕೊಂಡಿದ್ದು, ಕೃಷಿ ಮಾಡುವ ಉದ್ದೇಶದಿಂದ. ಅದಕ್ಕೆ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದೇವೆ. ಇದೇ ವಿಚಾರವಾಗಿ ಕೆಲಸ ಮಾಡುವ ಹುಡುಗರೊಂದಿಗೆ ಗ್ರಾಮಸ್ಥರು ಜಗಳವಾಡಿದ್ದಾರೆ. ಜೊತೆಗೆ ಅವರ ಮೇಲೆ ಕೈ ಮಾಡೋಕೆ ಮುಂದಾಗಿದ್ದಾರೆ. ನನ್ನ ತಂದೆ-ತಾಯಿ ತಡೆಯಲು ಹೋದಾಗ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದರು. ನಾವು ಕೂಡಾ ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ. ಎಲ್ಲಿಂದಲೋ ಬಂದಿದ್ದವರು ಅಂತಾರಂತೆ. ನಾನು ಹಾಸನದಲ್ಲೇ ಹುಟ್ಟಿದ ಮಗ. ನಾನು ರಾಜ್ಯದ ಯಾವ ಭಾಗದಲ್ಲಾದ್ರೂ ಜಮೀನು ಮಾಡಬಹುದು. ಅಷ್ಟೇ ಏಕೆ? ಬಡವರಿಗೆ ಉಪಯೋಗವಾಗುತ್ತೋ, ಶಾಲೆ ಕಟ್ಟಿಸುತ್ತಾರೋ.. ನಾನೇ ಹತ್ತೆಕರೆ ಜಾಗ ಬಿಟ್ಟು ಕೊಡುತ್ತೇನೆ. ಅನವಶ್ಯಕ ವಿವಾದಕ್ಕೆ ಬಣ್ಣ ಹಚ್ಚೋದು ಸರಿಯಲ್ಲ ಎಂದು ಯಶ್ ಹೇಳಿದರು.