ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು: ಯುಗಾದಿ ರಥೋತ್ಸವಕ್ಕೆ ಭರದ ಸಿದ್ಧತೆ - ಈಟಿವಿ ಭಾರತ ಕನ್ನಡ
ಚಾಮರಾಜನಗರ: ಯುಗಾದಿ ಜಾತ್ರೆ ಹಿನ್ನೆಲೆ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಡೇ ಅಮಾವಾಸ್ಯೆ ಆಗಿರುವುದರಿಂದ ಕ್ಷೇತ್ರದಲ್ಲಿ ಜನಸಾಗರವೇ ನೆರೆದಿದೆ. ಕರ್ನಾಟಕ ಸೇರಿದಂತೆ ವಿವಿದೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಯುಗಾದಿ ಹಬ್ಬಕ್ಕೆ ಹೆಚ್ಚಾಗಿ ತಮಿಳುನಾಡಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬುಧವಾರ ಕ್ಷೇತ್ರದಲ್ಲಿ ಯುಗಾದಿ ರಥೋತ್ಸವ ನಡೆಯಲಿದ್ದು,ಲಕ್ಷಾಂತರ ಮಂದಿ ಭಕ್ತರು ರಥೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಬಾರಿ ಮಹದೇಶ್ವರನ 108 ಅಡಿ ಎತ್ತರದ ಪ್ರತಿಮೆ ಕ್ಷೇತ್ರದ ಆಕರ್ಷಣೆಯ ಬಿಂದುವಾಗಿದೆ.
ಯುಗಾದಿಯು ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಚೈತ್ರಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಇದನ್ನು ಯುಗಾದಿ ಅಥವಾ ಉಗಾದಿ ಎಂದೂ ಕರೆಯಲಾಗುತ್ತದೆ. ಈ ದಿನ ಕುಟುಂಬಸ್ಥರೆಲ್ಲ ಸೇರಿಕೊಂಡು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಅಷ್ಟೇ ಯುಗಾದಿ ದಿನ ಬೇವು ಬೆಲ್ಲ ತಿನ್ನಲಾಗುತ್ತದೆ. ಯುಗಾದಿಯು ಜೀವನದಲ್ಲಿ ಸಿಹಿ ಮತ್ತು ಕಹಿಯನ್ನು ಸಮನಾಗಿ ಕಾಣಬೇಕೆಂಬ ಸಂದೇಶವನ್ನು ನೀಡುತ್ತದೆ.
ಇದನ್ನೂ ಓದಿ :ಅಕಾಲಿಕ ಗಾಳಿ ಮಳೆಗೆ ರೈತರ ನೂರಾರು ಎಕರೆ ಬೆಳೆ ನಾಶ: ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತರು