ಉಯ್ಯಾಲೆಯಲ್ಲಿ ಎಂಜಾಯ್ ಮಾಡುತ್ತಿದ್ದಾಗ ಕಬ್ಬಿಣದ ಕಂಬ ಬಡಿದು ಯುವಕ ಸಾವು! - ದುರ್ಗಾಪೂಜೆ ನಿಮಿತ್ತ ಆಯೋಜಿಸಲಾಗಿದ್ದ ಮೇಳದಲ್ಲಿ ಅವಘಡ
Published : Oct 27, 2023, 5:41 PM IST
ಜಮುಯಿ (ಬಿಹಾರ್) : ದುರ್ಗಾಪೂಜೆ ನಿಮಿತ್ತ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ ಅವಘಡ ಸಂಭವಿಸಿದ ಘಟನೆ ಇಲ್ಲಿನ ಜಮುಯಿ ಜಿಲ್ಲೆಯಲ್ಲಿ ವರದಿಯಾಗಿದೆ. ಜಾತ್ರಿಯಲ್ಲಿ ದೋಣಿ ಉಯ್ಯಾಲೆ ಏರಿ ಎಂಜಾಯ್ ಮಾಡುತ್ತಿದ್ದ ಯುವಕನ ತಲೆಗೆ ಕಬ್ಬಿಣದ ಕಂಬ ಬಡಿದಿದ್ದು, ಆತ ಮೃತಪಟ್ಟಿದ್ದಾನೆ. ಮಾಹುಲಿ ಗ್ರಾಮದ ನಿವಾಸಿ ಲಕ್ಷ್ಮೀ ಸಾವೋ ಎಂಬವರ ಪುತ್ರ ಸುಮನ್ ಕುಮಾರ್ (18) ಮೃತ ಯುವಕ ಎಂದು ಗುರುತಿಸಲಾಗಿದೆ.
ಉಯ್ಯಾಲೆಯ ಕಬ್ಬಿಣದ ಕಂಬ ಯುವಕನ ತಲೆಗೆ ಬಲವಾಗಿ ಹೊಡೆದಿದೆ. ಇದರಿಂದಾಗಿ ಪ್ರಜ್ಞೆತಪ್ಪಿ ಬಿದ್ದ ಯುವಕನನ್ನು ಪಕ್ಕದಲ್ಲಿದ್ದ ಮತ್ತೊಬ್ಬ ಯುವಕ ದೋಣಿಯೊಳಗೆ ಎಳೆದಿದ್ದಾನೆ. ಕೂಡಲೇ ಉಯ್ಯಾಲೆಯಲ್ಲಿದ್ದ ಸಿಬ್ಬಂದಿ ಆತನನ್ನು ಕೆಳಗಿಳಿಸಿ ಗಿಧೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿಂದ ಜುಮುಯಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಸುಮನ್ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಬಳಿಕ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂತಿಮವಾಗಿ ಸುಮನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟರು.
ಘಟನೆ ಕುರಿತು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ:ಗ್ಯಾಸ್ ಸಿಲಿಂಡರ್ ಸೋರಿಕೆ: ಹೊತ್ತಿ ಉರಿದ ಮನೆ, ತಪ್ಪಿದ ಅನಾಹುತ