ಅಕ್ಕಿ ನೀಡದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಲ್ಪಾಡ್ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ - Youth Congress workers protest
ಬೆಂಗಳೂರು:ಅಕ್ಕಿ ನೀಡದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು. ಮಲ್ಲೇಶ್ವರಂ 18 ನೆಯ ಕ್ರಾಸ್ ಗೋಕಾಕ್ ಉದ್ಯಾನದಲ್ಲಿ ನೆರೆದ ನೂರಾರು ಸಂಖ್ಯೆಯ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಲ್ನಡಿಗೆಯ ಮೂಲಕ ಬಿಜೆಪಿ ಮುಖಂಡರ ಮುಖವಾಡ ಧರಿಸಿ ಸಂಸದರ ಮತ್ತು ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಬಿಜೆಪಿ ಕಚೇರಿಯ ಬಳಿ ಬೆಳಗಿನಿಂದಲೂ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ಒಳ ಹೋಗದಂತೆ ತಡೆಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಾರ್ಯಕರ್ತರು ಬಿಜೆಪಿ ಕಚೇರಿಯ ಬಳಿ ಬ್ಯಾರಿಕೇಡ್ ಹಾರಿ ಒಳ ನುಗ್ಗಲು ಪ್ರಯತ್ನಿಸಿದರು. ಆಗ ತಡೆದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ನಿಯಂತ್ರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮದ್ ನಲ್ಪಾಡ್, ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ದೇಶದ ಎಲ್ಲ ಜನರನ್ನು ಒಂದೇ ತರಹ ನೋಡಬೇಕಿದೆ, ಕೇಂದ್ರ ಸರ್ಕಾರ ಇವರಪ್ಪನದಲ್ಲ ಎಂದು ಗುಡುಗಿದರು. ಬಿಜೆಪಿ ಪಕ್ಷಕ್ಕೆ ಮತ ಹಾಕಿದವರಿಗೂ ನಮ್ಮ ಸರ್ಕಾರ ಅಕ್ಕಿ ಕೊಡುತ್ತಿದೆ. ಯವುದೇ ತಾರತಮ್ಯ ಮಾಡುತ್ತಿಲ್ಲ. ಎಲ್ಲರಿಗೂ ನಾವು ಅಕ್ಕಿ ಕೊಟ್ಟು, ಒಂದೇ ರೀತಿ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದ 25 ಸಂಸದರ ಮುಖವಾಡಗಳನ್ನ ಧರಿಸಿ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:Youth Congress protest: ಸಂಸದರ ಮನೆ ಮುತ್ತಿಗೆ ಯತ್ನ.. ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ