ಜಗಳ ಕಾಯುತ್ತಿದ್ದ ಅಣ್ಣನನ್ನು 8 ತುಂಡುಗಳಾಗಿ ಕತ್ತರಿಸಿದ ತಮ್ಮ! - ବଲାଙ୍ଗୀର ଖବର
ಬಲಂಗೀರ್:ಮನೆಯವರೊಂದಿಗೆ ಸುಖಾಸುಮ್ಮನೇ ಜಗಳ ಮಾಡುತ್ತಾನೆ ಎಂದು ಸಿಟ್ಟಿಗೆದ್ದ ತಮ್ಮ, ಸಹೋದರನನ್ನೇ 8 ತುಂಡುಗಳನ್ನಾಗಿ ಕತ್ತರಿಸಿ ಕೊಂದ ಭೀಕರ, ಆಘಾತಕಾರಿ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ್ದು ಗೊತ್ತಾಗಬಾರದು ಎಂದು ದೇಹವನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿಡಲಾಗಿತ್ತು. ದುರ್ವಾಸನೆಯಿಂದಾಗಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಬಲಂಗೀರ್ ಜಿಲ್ಲೆಯ ಸಾಲೇಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಳೆಯ ಮನೆಯೊಂದರಲ್ಲಿ ಮೃತದೇಹದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯವರೊಂದಿಗೆ ಕಿತ್ತಾಡುತ್ತಿದ್ದರಿಂದ ಬೇಸರಗೊಂಡು ಅಣ್ಣನ ವಿರುದ್ಧ ರೊಚ್ಚಿಗೆದ್ದ ತಮ್ಮ ಆತನೊಂದಿಗೆ ಕಾದಾಟಕ್ಕಿಳಿದು ಕೋಪದಲ್ಲಿ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಬಳಿಕ ಇದು ಯಾರಿಗೂ ಗೊತ್ತಾಗಬಾರದು ಎಂದು ದೇಹವನ್ನು 8 ತುಂಡುಗಳನ್ನಾಗಿ ಮಾಡಿ ಚೀಲದಲ್ಲಿ ತುಂಬಿ ಹಳೆಯ ಮನೆಯೊಂದರಲ್ಲಿ ಬಿಸಾಡಿದ್ದ.
ತರುವಾಯ ಮನೆಯಿಂದ ದುರ್ವಾಸನೆ ಬರಲು ಶುರು ಮಾಡಿದಾಗ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಮನೆಯಲ್ಲಿ ಮಗ ನಾಪತ್ತೆಯಾಗಿದ್ದು, ಅನುಮಾನ ಮೂಡಿಸಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತನಿಖೆಯ ವೇಳೆ ತಮ್ಮನೇ ಆರೋಪಿ ಎಂದು ಗೊತ್ತಾಗಿ ಬಂಧಿಸಲಾಗಿದೆ.
ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲಾಯಿತು. ಕೊಲೆಗೆ ಕೌಟುಂಬಿಕ ಕಲಹವೇ ಕಾರಣ. ಮೃತನ ತಂದೆ ಆಸ್ಪತ್ರೆಗೆ ದಾಖಲಾಗಿರುವುದರಿಂದ, ಕುಟುಂಬದ ಇತರ ಸದಸ್ಯರಿಗೆ ಕೊಲೆಯ ಬಗ್ಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ಬಸ್ಗೆ ಸಿಲುಕಿದ ಬೈಕನ್ನು 90ರ ವೇಗದಲ್ಲಿ 12 ಕಿಮೀ ಎಳೆದೊಯ್ದ ಚಾಲಕ: ವಿಡಿಯೋ