ದಶಪಥ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿದ ಯುವಕ.. ಪ್ರಕರಣ ದಾಖಲಿಸಿದ ಬಿಡದಿ ಪೊಲೀಸರು - ಬಿಡದಿ ಠಾಣೆ ಪೊಲೀಸರು
ರಾಮನಗರ : ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಇತ್ತೀಚಿಗೆ ಕೆಲ ತಿಂಗಳಿನಿಂದ ಅಪಘಾತಗಳ ಕಾರಣದಿಂದ ಸುದ್ದಿಯಲ್ಲಿದ್ದರೆ, ಮತ್ತೊಂದೆಡೆ ದಶಪಥ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಇದೀಗ ಮತ್ತೆ ವ್ಹೀಲಿಂಗ್ ಮಾಡಿದ ಯುವಕನೊಬ್ಬ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸ್ವತಃ ತಗಲಾಕಿಕೊಂಡಿದ್ದಾನೆ. ಬಿಡದಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಡದಿ ಠಾಣಾ ವ್ಯಾಪ್ತಿಯಲ್ಲಿ ಕೇತಗಾನಹಳ್ಳಿ ಬಳಿಯ ದಶಪಥ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ದರ್ಶನ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದ್ದು, ಈತ ಸ್ಕೂಟಿಯಲ್ಲಿ ಹೆಲ್ಮೆಟ್ ಕೂಡಾ ಧರಿಸದೆ ವ್ಹೀಲಿಂಗ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ತನ್ನ ವ್ಹೀಲಿಂಗ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಪೋಸ್ಟ್ ವಿಡಿಯೋ ಆಧರಿಸಿ ವ್ಹೀಲಿಂಗ್ ಶೂರನ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಬಿಡದಿ ಠಾಣೆ ಪೊಲೀಸರು ಮೋಟಾರ್ ವೆಹಿಕಲ್ ಕಾಯ್ದೆಯಡಿ ಕೇಸು ಹಾಕಿದ್ದಾರೆ. ಪದೇ ಪದೆ ಇಂತಹ ಘಟನೆಗಳು ಹೆದ್ದಾರಿಯಲ್ಲಿ ಮರುಕಳಿಸುತ್ತಿವೆ. ಮುಂದಿನ ದಿನಗಳಲ್ಲಿ ವ್ಹೀಲಿಂಗ್ ಮಾಡುವವರ ವಾಹನ ಪರವಾನಿಗೆ ರದ್ದುಪಡಿಸುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ.
ಇದನ್ನೂ ಓದಿ:ಬೆಂಗಳೂರಿನ ರಸ್ತೆಯಲ್ಲಿ ಹುಡುಗರ ವ್ಹೀಲಿಂಗ್; ಪೋಷಕರ ವಿರುದ್ಧ ಪ್ರಕರಣ ದಾಖಲು