Watch... ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಜಿಗಿದು ಯುವಕನ ದುಸ್ಸಾಹಸ ವಿಡಿಯೋ ವೈರಲ್ - ತುಂಗಾ ಜಲಾಶಯ
ಶಿವಮೊಗ್ಗ: ಯುವಕನೊಬ್ಬ ತುಂಗಾ ನದಿಗೆ ಸೇತುವೆ ಮೇಲಿನಿಂದ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಯುವಕ ನದಿಯಲ್ಲಿ ಸ್ವಲ್ಪ ಹೊತ್ತು ಈಜಿ ಬಳಿಕ ದಡ ಸೇರಿದ್ದಾನೆ ಎನ್ನಲಾಗುತ್ತಿದೆ. ಆದರೆ, ಯುವಕನ ಹುಚ್ಚಾಟ ಕೆಲವು ಕ್ಷಣ ಜನರಲ್ಲಿ ಆತಂಕ ಮೂಡಿಸಿದ್ದಂತೂ ಸುಳ್ಳಲ್ಲ.
ಯುವಕನೊಬ್ಬ ತುಂಗಾ ನದಿ ಹೊಸ ಸೇತುವೆ ತಡೆಗೋಡೆ ಮೇಲಿನಿಂದ ಜಿಗಿದಿದ್ದಾನೆ. ರಭಸವಾಗಿ ಹರಿಯುವ ನೀರಿನಲ್ಲಿ ರೈಲ್ವೆ ಸೇತುವೆ ವರೆಗೂ ತಲುಪಿದ್ದಾನೆ. ಅಲ್ಲಿಂದ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ಈಜುತ್ತಾನೆ. ಪಕ್ಕದ ದಡಕ್ಕೆ ತಲುಪಿ ಅಲ್ಲಿಂದ ಮೇಲೆ ಬರುತ್ತಾನೆ. ಈ ವೇಳೆ, ವಿಡಿಯೋ ಚಿತ್ರೀಕರಣ ಮಾಡಿದ್ದ ಯುವಕರು ಆತ ಮದ್ಯ ಸೇವಿಸಿದ್ದಾನೆ ಎಂದು ಮಾತನಾಡಿಕೊಳ್ಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಪೊಲೀಸರಿಗೆ ಮಾಹಿತಿ: ತುಂಗಾ ನದಿ ಸೇತುವೆ ಮೇಲಿಂದ ಯುವಕ ಜಿಗಿಯುವುದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಗಂಗಪ್ಪ ಎಂಬ ಯುವಕನು ಹೊಳೆಗೆ ಹಾರಿದವನೆಂದು ಗುರುತಿಸಿದ್ದಾರೆ.
ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯದಿಂದ ಪ್ರಸ್ತುತ 60 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡಲಾಗುತ್ತಿದೆ. ಮೈದುಂಬಿ ಹರಿಯುತ್ತಿರುವ ತುಂಗಾ, ಮುಳುಗಿರುವ ಮಂಟಪ ಕಣ್ತುಂಬಿಕೊಳ್ಳಲು ಜನರು ಸೇತುವೆ ಬಳಿ ಆಗಮಿಸುತ್ತಿದ್ದು,ಇಂತಹ ಸಮಯದಲ್ಲಿ ಯುವಕನ ದುಸ್ಸಾಹಸ ಹಲವರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂಓದಿ:ಬೆಳಗಾವಿಯಲ್ಲಿ ಮಳೆ ಅವಾಂತರ: ಮನೆ, ವಿದ್ಯುತ್ ಮಗ್ಗದ ಕಾರ್ಖಾನೆಗಳಿಗೆ ನುಗ್ಗಿದ ನೀರು.. ಸಂಕಷ್ಟದಲ್ಲಿ ಜನಜೀವನ