ಯಮುನೆಯ ನೀರಿನ ಮಟ್ಟ 204 ಮೀಟರ್! ಅಪಾಯದ ಗಡಿ ಮೀರಿ ಹರಿಯುತ್ತಿದೆ ನದಿ- ವಿಡಿಯೋ - ಈಟಿವಿ ಭಾರತ ಕನ್ನಡ
ನವದೆಹಲಿ:ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಸದ್ಯದ ಮಟ್ಟ 204.50 ಮೀಟರ್‌ಗಳಾಗಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ನೀರಿನ ಮಟ್ಟ 205.10 ಮೀಟರ್ ಏರಿಕೆಯಾಗಿತ್ತು. ಹತಿನಿಕುಂಡ್ ಬ್ಯಾರೇಜ್‌ನಿಂದ ನಿನ್ನೆ 1,90,837 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದಾಗಿ ರಾತ್ರಿ 8 ಗಂಟೆಗೆ ನದಿ ನೀರಿನ ಮಟ್ಟ 205.76 ಮೀಟರ್‌ಗೆ ತಲುಪಿದೆ. ಇಂದು ನೀರಿನ ಮಟ್ಟ 206.65 ಮೀಟರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.
ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಯಮುನಾ ದಡದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಪೂರ್ವ ದೆಹಲಿ ಜಿಲ್ಲಾಡಳಿತವು ಪ್ರವಾಹದ ಸಾಧ್ಯತೆ ಹೆಚ್ಚಿರುವ ಕಾರಣ ತಗ್ಗು ಪ್ರದೇಶದಲ್ಲಿ ಸುಮಾರು 41,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ.
ದೆಹಲಿ ಸೆಕ್ರೆಟರಿಯೇಟ್, ಕಾಶ್ಮೀರ್ ಗೇಟ್, ಯಮುನಾ ಬಜಾರ್, ಐಟಿಒ ರೆಡ್ ಫೋರ್ಟ್, ಲಕ್ಷ್ಮಿ ನಗರ, ಆನಂದ್ ವಿಹಾರ್, ವಿವೇಕ್ ವಿಹಾರ್, ಪ್ರೀತ್ ವಿಹಾರ್, ಕೃಷ್ಣ ನಗರ, ಶಾಹದಾರ, ವಜೀರಾಬಾದ್, ಬಾಬರ್‌ಪುರ, ಅಲಿಪುರ್ ಹಾಗು ನಂಗ್ಲೋಯ್ ಮುಂತಾದೆಡೆ ಪ್ರವಾಹ ಭೀತಿ ತಲೆದೋರಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ನಿನ್ನೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದು, ನಗರದ ಪರಿಸ್ಥಿತಿ ಹಾಗೂ ಯಮುನಾ ನದಿ ನೀರಿನ ಮಟ್ಟ ಏರಿಕೆಯ ಕುರಿತು ಚರ್ಚಿಸಿದ್ದಾರೆ. ಆದಾಗ್ಯೂ, ದೆಹಲಿ ಪ್ರವಾಹಕ್ಕೊಳಗಾಗುವ ಸಾಧ್ಯತೆ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಉತ್ತರಾಖಂಡದ ಚಮೋಲಿಯ ಜುಮ್ಮಾ ಗ್ರಾಮದಲ್ಲಿ ಹಿಮನದಿ ಸ್ಫೋಟಗೊಂಡಿದೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ