'ತಂಬಾಕು ತ್ಯಜಿಸಿ': ವಿಶೇಷ ಮರಳು ಕಲಾಕೃತಿ ನೋಡಿ.. - sand artist Sudarshan Patnaik creation
ಒಡಿಶಾ:ತಂಬಾಕು ವಿರೋಧಿ ದಿನವನ್ನು 'ವಿಶ್ವ ತಂಬಾಕು ರಹಿತ ದಿನ' ಎಂದೂ ಕರೆಯಲಾಗುತ್ತದೆ. ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಂಬಾಕು ಸೇವನೆ ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ಪ್ರತಿಪಾದಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ನೇತೃತ್ವದ ಜಾಗತಿಕ ಉಪಕ್ರಮವಾಗಿ ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತದೆ.
'ವಿಶ್ವ ತಂಬಾಕು ರಹಿತ ದಿನ 2023' ಸಂದರ್ಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಒಡಿಶಾದ ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್‌ನಲ್ಲಿ ಮರಳು ಕಲೆ ರಚಿಸುವ ಮೂಲಕ 'ತಂಬಾಕು ತ್ಯಜಿಸಿ' ಎಂಬ ಸಂದೇಶ ನೀಡಿದ್ದಾರೆ. ಅವರು ತಮ್ಮ ಮರಳು ಕಲೆಯ ಮೂಲಕ ವಿಭಿನ್ನ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಕಲಾಕೃತಿ ತಂಬಾಕಿನ ಹಾನಿಕಾರಕ ಪರಿಣಾಮಗಳು ಮತ್ತು ಅದು ಹೇಗೆ ಮಾನವ ದೇಹದಲ್ಲಿ ವಿವಿಧ ಕ್ಯಾನ್ಸರ್ಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ.
ಈ ವರ್ಷದ ಥೀಮ್ ಹೀಗಿದೆ..: "ನಮಗೆ ಆಹಾರ ಬೇಕು, ತಂಬಾಕು ಅಲ್ಲ". ಧೂಮಪಾನ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳು ಸೇರಿದಂತೆ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ತಂಬಾಕು ವಿರೋಧಿ ದಿನದ ಉದ್ದೇಶ. ಇದು ತಂಬಾಕು ತ್ಯಜಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ತಂಬಾಕು ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಉತ್ತೇಜಿಸುತ್ತದೆ.
ಇತಿಹಾಸ:ತಂಬಾಕು ಸಾಂಕ್ರಾಮಿಕ ಮತ್ತು ತಡೆಗಟ್ಟಬಹುದಾದ ಸಾವು ಮತ್ತು ರೋಗಗಳ ಬಗ್ಗೆ ಜಾಗತಿಕ ಗಮನವನ್ನು ಸೆಳೆಯಲು 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ವಿಶ್ವ ತಂಬಾಕು ರಹಿತ ದಿನ ಆರಂಭಿಸಲಾಯಿತು.
ಇದನ್ನೂ ಓದಿ:ವಿಶ್ವ ತಂಬಾಕು ರಹಿತ ದಿನ 2023: ತಂಬಾಕು ಮುಕ್ತ ಜಗತ್ತು ನಿರ್ಮಾಣಕ್ಕೆ ಕೈ ಜೋಡಿಸಿ..