ಪ್ರಧಾನಿ ಉಡುಗೊರೆಗೆ ಸಿದ್ಧವಾಯಿತು ಜಗತ್ಪ್ರಸಿದ್ಧ ಕಲಘಟಗಿ ತೊಟ್ಟಿಲು - ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆ
ಹುಬ್ಬಳ್ಳಿ : ಕಲಘಟಗಿ ಬಣ್ಣದ ತೊಟ್ಟಿಲು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲು ಉಡುಗೊರೆಯಾಗಿ ನೀಡುವುದು ಹೊಸ ಟ್ರೆಂಡ್ ಆಗಿದೆ. ಈ ನಿಟ್ಟಿನಲ್ಲಿ ಈಗ ಕಲಘಟಗಿ ತೊಟ್ಟಿಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಕೈಸೇರಲಿದೆ.
ಇದೇ 12ರಂದು ಧಾರವಾಡ ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರು, ಐಐಟಿ ಉದ್ಘಾಟನೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಲೋಕಾರ್ಪಣೆಗೆ ಆಗಮಿಸುತ್ತಿರುವ ಹಿನ್ನೆಲೆ ಈಗ ಕಲಘಟಗಿಯ ತೊಟ್ಟಿಲು ಉಡುಗೊರೆಯಾಗಿ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಹಾವೇರಿಯ ಯಾಲಕ್ಕಿ ಮಾಲೆ, ಸಿದ್ಧಾರೂಢರ ಮೂರ್ತಿ, ಕಸೂತಿಯ ಶಾಲ್ ಸೇರಿದಂತೆ ಹಲವಾರು ಉಡುಗೊರೆ ನೀಡಲು ನಿರ್ಧಾರ ಮಾಡಲಾಗಿದೆ. ಎರಡು – ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡಿಕೊಂಡು ಬಂದಿರುವ ಕುಟುಂಬದ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ ಬಡಿಗೇರ ಅವರು ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ತೊಟ್ಟಿಲು ತಯಾರಿಸಿದ್ದಾರೆ.
'ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆಗಳು, ತುಂಟಾಟಗಳು, ಬೆಣ್ಣೆಯೊಂದಿಗೆ ಕೃಷ್ಣ ಹೀಗೆ ಅನೇಕ ಕಥೆಗಳನ್ನು ಹೇಳಲು ಪ್ರೇರೇಪಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ. ತೊಟ್ಟಿಲಿನ ಸ್ಟ್ಯಾಂಡ್‌ಗೆ ಚಿಕ್ಕ ಗಂಟೆಗಳನ್ನು ಕಟ್ಟಿದ್ದು, ಕಣ್ಮನ ಸೆಳೆಯುವ ಬಣ್ಣಗಳಿಂದ ಅಲಂಕರಿಸಲಾಗಿದೆ. ತೇಗದ ಮರದಿಂದ ಮಾಡಿರುವ ತೊಟ್ಟಿಲಿಗೆ ಜೇಡಿಮಣ್ಣು, ಅಂಟು, ಅರಗು ಬಳಸಲಾಗಿದೆ. ಸಾಂಪ್ರದಾಯಿಕತೆಗೆ ಒತ್ತು ಕೊಡಲಾಗಿದೆ. ಅತ್ಯುತ್ತಮ ಗುಣಮಟ್ಟದ ಕಟ್ಟಿಗೆಗಳನ್ನು ಬಳಸಲಾಗಿದ್ದು, ಕನಿಷ್ಠ 100 ವರ್ಷ ಬಾಳಿಕೆ ಬರುತ್ತದೆ. ಶ್ರೇಷ್ಠ ಗುಣಮಟ್ಟ ಮತ್ತು ಕಡಿಮೆ ತೂಕದ ತೊಟ್ಟಿಲು ನಿರ್ಮಿಸಿದ್ದೇವೆ' ಎನ್ನುತ್ತಾರೆ ಮಾರುತಿ ಬಡಿಗೇರ ಹೇಳಿದ್ದಾರೆ.
ಇದನ್ನೂ ಓದಿ :ಬುತ್ತಿ ಜಾತ್ರೆಯಲ್ಲಿ ಸಿದ್ದೇಶ್ವರ ಶ್ರೀಗಳ ಚಿತ್ರ ಬಿಡಿಸಿದ ಕಲಾವಿದ- ವಿಡಿಯೋ