ಏ.25ರಿಂದ ಕೇದಾರನಾಥ ಯಾತ್ರೆ: ಭರದಿಂದ ಸಾಗುತ್ತಿದೆ ಹಿಮ ತೆರವು ಕಾರ್ಯ
ರುದ್ರಪ್ರಯಾಗ (ಉತ್ತರಾಖಂಡ್):ವಿಶ್ವವಿಖ್ಯಾತ ಕೇದಾರನಾಥ ಯಾತ್ರೆಯು ಏಪ್ರಿಲ್ 25ಕ್ಕೆ ಪ್ರಾರಂಭವಾಗಲಿದ್ದು, ಈ ಹಿನ್ನೆಲೆ ಇಲ್ಲಿನ ಪಾದಚಾರಿ ಮಾರ್ಗದ ಹಿಮವನ್ನು ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಪ್ರತಿಕೂಲ ವಾತಾವರಣದಲ್ಲೂ ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಮಾರ್ಗದ ಹಿಮ ತೆಗೆಯುವ ಕಾರ್ಯ ನಡೆಯುತ್ತಿದೆ. ಸುಮಾರು 4 ಕಿಮೀ ನಷ್ಟು ಹಿಮವನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಇನ್ನು ಕೇವಲ 2 ಕಿಮೀ ಮಾತ್ರ ಬಾಕಿ ಉಳಿದಿದೆ. ಸುಮಾರು 50 ಕಾರ್ಮಿಕರು ಹಿಮವನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಹವಾಮಾನ ವೈಪರೀತ್ಯ ಮುಂದುವರೆದಿದ್ದು, ಹಿಮಪಾತ ಉಂಟಾಗುತ್ತಿದೆ.
ಈ ಪಾದಚಾರಿ ರಸ್ತೆ ಸಂಚಾರಕ್ಕೆ ಮುಕ್ತವಾದ ಬಳಿಕ ಕುದುರೆ, ಹೇಸರಗತ್ತೆಗಳ ಓಡಾಟ ಪ್ರಾರಂಭವಾಗಲಿದೆ. ಜೊತೆಗೆ ಕೇದಾರನಾಥ ದೇವಾಲಯದ ಪುನರ್ ನಿರ್ಮಾಣದ ಕಾರ್ಯವೂ ಆರಂಭವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್, ಐವತ್ತು ಕಾರ್ಮಿಕರು ಹಿಮವನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಬಹುತೇಕ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಹಾರ್ಮೋನಿಯಂ ನುಡಿಸಿ ಗಮನ ಸೆಳೆದ ಉಪ ರಾಷ್ಟ್ರಪತಿ ಜಗದೀಪ್ ಧನಕರ್!