'ಮೋದಿ ಹೇ ತೋ ಮುಮ್ಕಿನ್ ಹೇ...': ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಚಿವೆ ಸ್ಮೃತಿ ಇರಾನಿ ಮೆಚ್ಚುಗೆ
Published : Sep 22, 2023, 8:12 AM IST
ನವದೆಹಲಿ:ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿ, "ನಾವು ಯಾವಾಗಲೂ 'ಮೋದಿ ಹೈ ತೋ ಮುಮ್ಕಿನ್ ಹೈ' (ಮೋದಿ ಇದ್ರೆ ಸಾಧ್ಯವಾಗುತ್ತದೆ) ಎಂದು ಹೇಳುತ್ತಿದ್ದೆವು. ಈ ಮಾತನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೋಟಿಗಟ್ಟಲೆ ಅಕ್ಕ-ತಂಗಿಯರು, ತಾಯಂದಿರ ವತಿಯಿಂದ ಪ್ರಧಾನಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯಲ್ಲಿ ಪ್ರಯಾಣ ಆರಂಭಿಸಿದಾಗಿನಿಂದ ಪಕ್ಷ ಸಂಘಟನೆಯಲ್ಲಿಯೂ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ. 1971ರಲ್ಲಿ ಸರ್ಕಾರ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿತ್ತು. ಅದರ ವರದಿ ಬಂದಿದ್ದು 1974ರಲ್ಲಿ. ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳ ಖಾತರಿ ನೀಡಬೇಕು ಎಂದು ಭಾರತೀಯ ಜನಸಂಘ ಹೇಳಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ನಾವಿಂದು ಅದಕ್ಕೆ ಸಾಂವಿಧಾನಿಕ ರೂಪ ನೀಡಿದ್ದೇವೆ" ಎಂದು ತಿಳಿಸಿದರು.
"ಈ ನಿರ್ಧಾರ ಸಾಮಾಜಿಕ ಬದಲಾವಣೆ ತರಲಿದೆ. ಮಹಿಳಾ ಮೀಸಲಾತಿ ಮಸೂದೆ ಕುರಿತು ನ್ಯಾಯಾಲಯದ ಮೊರೆ ಹೋಗುವಂತೆ ಕಾಂಗ್ರೆಸ್ ತಕ್ಷಣವೇ ಅದನ್ನು ಜಾರಿಗೆ ತರಲು ಒತ್ತಾಯಿಸುತ್ತಿದೆ" ಎಂದು ಇರಾನಿ ಟೀಕಿಸಿದರು. ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ನಂತರ ಮಹಿಳಾ ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ:ರಾಜ್ಯಸಭೆಯಲ್ಲೂ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ.. ಎಲ್ಲ 215 ಸಂಸದರಿಂದ ಪರವಾಗಿ ಮತ ಚಲಾವಣೆ