ಪ್ರತಿ ತಿಂಗಳು 2,000 ರೂಪಾಯಿ; 'ಗೃಹಲಕ್ಷ್ಮಿ'ಯರು ಹೇಳಿದ್ದೇನು?- ವಿಡಿಯೋ - ಮಳವಳ್ಳಿ ತಾಲೂಕಿನ ಪುರಗಾಲಿ ಗ್ರಾಮ
Published : Aug 30, 2023, 5:07 PM IST
ಮೈಸೂರು:ರಾಜ್ಯಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ 'ಗೃಹಲಕ್ಷ್ಮಿ ಯೋಜನೆ' ಇಂದು ಜಾರಿಯಾಗಿದೆ. ಯೋಜನೆಯ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಮನೆ ಯಜಮಾನಿಯರು ತಮ್ಮ ಅನಿಸಿಕೆಗಳನ್ನು ಈಟಿವಿ ಭಾರತ್ ಪ್ರತಿನಿಧಿ ಜೊತೆಗೆ ಹಂಚಿಕೊಂಡರು.
ರಾಜ್ಯದ ಎಲ್ಲ ಮನೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಚಾಲನೆ ನೀಡಿದರು.
ಯೋಜನೆ ಚೆನ್ನಾಗಿದೆ. ಮನೆ ನಡೆಸಲು ಸಹಾಯವಾಗುತ್ತದೆ. ಯಜಮಾನಿಯರ ಸಂಕಷ್ಟದ ಸಮಯದಲ್ಲಿ ಅನುಕೂಲ ಆಗುತ್ತದೆ ಎಂದು ಮಹಿಳೆಯೊಬ್ಬರು ಹೇಳಿದರು. ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಅವುಗಳನ್ನು ಕಡಿಮೆ ಮಾಡಿದರೆ ಇನ್ನೂ ಅನುಕೂಲ ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡರು. ಎರಡು ಸಾವಿರ ರೂ ಹಣ ಕೊಡುವ ಬದಲು, ಗೋಧಿ, ಅಕ್ಕಿ, ರಾಗಿ, ಸಕ್ಕರೆ ನೀಡಿದ್ದರೆ, ಇದರ ಜೊತೆಗೆ ಗ್ಯಾಸ್ ಬೆಲೆಯನ್ನೂ ಕಡಿಮೆ ಮಾಡಿದರೆ ಲಾಭವಾಗುತ್ತದೆ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪುರಗಾಲಿ ಗ್ರಾಮದ ಮಹಿಳೆ ಸಲಹೆ ನೀಡಿದರು.