ಕೊಡಗಲ್ಲಿ ನಿಲ್ಲದ ಕಾಡಾನೆ ದಾಳಿ: ನಿನ್ನೆ ಮತ್ತೆ ಕೂಲಿ ಕಾರ್ಮಿಕ ಮಹಿಳೆ ಬಲಿ.. ಜನರಿಂದ ದಿಕ್ಕಾರ - ಕೂಲಿ ಕಾರ್ಮಿಕ ಮಹಿಳೆ ಸಾವು
Published : Aug 22, 2023, 10:06 AM IST
ಕೊಡಗು:ಕೊಡಗಿನಲ್ಲಿ ಮಾನವ ಮತ್ತು ಕಾಡಾನೆಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆ ತಾನೆ ಟ್ರ್ಯಾಕ್ಟರ್ ಚಾಲಕ ಕಾಡಾನೆ ದಾಳಿಗೆ ಮೃತಪಟ್ಟಿದ್ದ. ನಿನ್ನೆ ಮತ್ತೆ( ಸೋಮವಾರ)ಕೂಡ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಸತತ ಕಾಡಾನೆ ದಾಳಿಯಿಂದ ಸುತ್ತಮುತ್ತಲಿನ ಜನರು ಭಯದಲ್ಲಿ ಜೀವನ ಮಾಡುವಂತಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಿನ್ನೆ ಘಟನೆ ನಡೆದಿದೆ. ಆಯಿಶಾ(63) ಮೃತ ಮಹಿಳೆಯಾಗಿದ್ದು,
ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಒಂಟಿ ಸಲಗ ದಾಳಿ ಮಾಡಿದೆ. ಆನೆ ತುಳಿತದ ಪರಿಣಾಮ ಸ್ಥಳದಲ್ಲಿಯೇ ಆಯಿಶಾ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇನ್ನು ಜಿಲ್ಲೆಯಲ್ಲಿ ಪದೇ ಪದೆ ಕಾಡಾನೆ ದಾಳಿಯಿಂದ ಬೇಸತ್ತಿರುವ ಸಿದ್ದಾಪುರ ಸುತ್ತಮುತ್ತಲಿನ ಜನರು, ಕಾರ್ಮಿಕರು ಸರ್ಕಾರ, ಅರಣ್ಯ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ. ಆಹಾರ ಅರಸಿ ಬರುವ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೊಡಗು: ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ