ಕರ್ನಾಟಕ

karnataka

ಶಕ್ತಿ ಯೋಜನೆ ಎಫೆಕ್ಟ್: ಧಾರ್ಮಿಕ ಕ್ಷೇತ್ರಗಳಿಗೆ ಹರಿದು ಬರುತ್ತಿರುವ ಮಹಿಳಾ ಭಕ್ತರು.. ಆಯತಪ್ಪಿ ಬಸ್​ನಿಂದ ಬಿದ್ದ ಬಾಲಕಿ

By

Published : Jun 18, 2023, 5:53 PM IST

ಶಕ್ತಿ ಯೋಜನೆ ಎಫೆಕ್ಟ್: ಧಾರ್ಮಿಕ ಕ್ಷೇತ್ರಗಳಿಗೆ ಹರಿದು ಬರುತ್ತಿರುವ ಮಹಿಳಾ ಭಕ್ತರ ದಂಡು..

ಬೆಳಗಾವಿ: ಶಕ್ತಿ ಯೋಜನೆ ಪರಿಣಾಮ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳಾ ಭಕ್ತರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಪ್ರಸಿದ್ಧ ಸವದತ್ತಿಯ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಮಹಿಳೆಯರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಸ್​ಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಿಕರೇ ಸಂಚರಿಸುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇಂದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಯಲ್ಲಮ್ಮನ ಗುಡ್ಡಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. 

ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳಾ ಭಕ್ತರು ಯಲ್ಲಮ್ಮ ದೇವಿಯ ದರ್ಶನ ಪಡೆದಿದರು. ಅಲ್ಲದೇ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟ‌ ಸಿದ್ದರಾಮಯ್ಯ ಸರ್ಕಾರಕ್ಕೆ ಎಲ್ಲ ಮಹಿಳೆಯರು ಕೃತಜ್ಞತೆ ಸಲ್ಲಿಸಿದ್ದಾರೆ. ಅದೇ ರೀತಿ ಉಳವಿಯ ಶ್ರೀ ಚನ್ನಬಸವೇಶ್ವರ, ಬೆಳಗಾವಿ ತಾಲೂಕಿನ ಸುಳೇಭಾವಿಯ ಪ್ರಸಿದ್ಧ ಮಹಾಲಕ್ಷ್ಮೀ ದೇವಿ ಮಂದಿರ, ಸೊಗಲ ಸೋಮೇಶ್ವರ ದೇವಸ್ಥಾನ‌ ಸೇರಿ ಇನ್ನಿತರ ಪುಣ್ಯ ಕ್ಷೇತ್ರಗಳಿಗೆ ಸಾವಿರಾರು ಭಕ್ತರು ಕೆಎಸ್ಆರ್​ಟಿಸಿ ಬಸ್​ಗಳ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ. 

ರಶ್ ಆಗಿದ್ದ ಬಸ್​ನಿಂದ ಆಯತಪ್ಪಿ‌ ಕೆಳಗೆ ಬಿದ್ದ ಬಾಲಕಿ:ಮತ್ತೊಂದೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಚಲಿಸುವ ಬಸ್‌ನಿಂದ ಬಾಲಕಿಯೊಬ್ಬಳು ಜಾರಿಬಿದ್ದ ಘಟನೆ ರಾಮದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾಮದುರ್ಗದಿಂದ ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸು ಫುಲ್ ರಶ್ ಆಗಿತ್ತು. ಆಸನಗಳು ಭರ್ತಿಯಾದರೂ ನಿಂತುಕೊಂಡೇ ಬಸ್​ನಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹೀಗಾಗಿ ಬಸ್ ಬಾಗಿಲು ಬಳಿ ನಿಂತಿದ್ದ ಬಾಲಕಿ ಬಸ್‌ನಿಂದ ಕೆಳಗೆ ಬಿದ್ದಿದ್ದಾಳೆ.   

ತಮ್ಮ ಮಗಳು ಬಸ್ಸಿನಿಂದ ಕೆಳಗೆ ಬಿದ್ದಿದ್ದರಿಂದ ಕೋಪಗೊಂಡ ಬಾಲಕಿಯ ಪೋಷಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ನೋಡಿಕೊಂಡು ಬಸ್ ಓಡಿಸಬೇಕು. ನಮ್ಮ ಮಗಳ ಜೀವಕ್ಕೆ ಏನಾದರು ಆಗಿದ್ದರೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾವಾಸ್ಯೆ ಹಿನ್ನೆಲೆ ದೇವಸ್ಥಾನ, ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿ ಇತರೆ ತೀರ್ಥಕ್ಷೇತ್ರಗಳಿಗೆ ಜನರು ತೆರಳುತ್ತಿರುವುದರಿಂದ ಬಸ್ಸಿನಲ್ಲಿ ಸೀಟ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶೇ. 50% ಮಾತ್ರ ಮಹಿಳೆಯರಿಗೆ ಕುಳಿತುಕೊಳ್ಳುವ ನಿಯಮ ಹಿನ್ನೆಲೆ ಬಸ್ ನಲ್ಲಿ‌ ಸೀಟ್ ಹಿಡಿಯಲು ಮಹಿಳೆಯರು ಮುಗಿಬಿಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. 

ಇದನ್ನೂ ಓದಿ:ಪ್ರತ್ಯೇಕ ಘಟನೆ: ನೂಕುನುಗ್ಗಲಿಗೆ ಕಿತ್ತು ಬಂತು ಸರ್ಕಾರಿ ಬಸ್​ ಡೋರ್​.. ಕಾಡಿನ ಮಧ್ಯದಲ್ಲಿ ಮಹಿಳೆಯರನ್ನು ಇಳಿಸಿದ ಬಸ್​ ಕಂಡಕ್ಟರ್​

ABOUT THE AUTHOR

...view details