ಬೆಂಗಳೂರು: ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ- ವಿಡಿಯೋ - ರಾಜಾನುಕಂಟೆ ರೈಲ್ವೆ ಮಾರ್ಗ
Published : Aug 29, 2023, 7:43 AM IST
ಬೆಂಗಳೂರು:ಗೂಡ್ಸ್ ರೈಲು ನಿಂತಿದ್ದ ವೇಳೆ ಮಹಿಳೆಯೊಬ್ಬರು ಹಳಿ ದಾಟಲು ಯತ್ನಿಸಿದ್ದಾರೆ. ಇದ್ದಕ್ಕಿದ್ದಂತೆ ರೈಲು ಚಲಿಸಲು ಆರಂಭಿಸಿದೆ. ಧೈರ್ಯಗೆಡದ ಗಟ್ಟಿಗಿತ್ತಿ ಮಹಿಳೆ, ತಕ್ಷಣವೇ ಎಚ್ಚೆತ್ತುಕೊಂಡು ರೈಲಿನ ಕೆಳಗೆ ಮಲಗಿ ತನ್ನ ಜೀವ ಉಳಿಸಿಕೊಂಡಿದ್ದಾರೆ.
ಯಲಹಂಕ ತಾಲೂಕು ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಅದ್ದಿಗಾನಹಳ್ಳಿಯ ಮಹಿಳೆಯೊಬ್ಬರು ರಾಜಾನುಕುಂಟೆಗೆ ಹೋಗ ಬೇಕಿತ್ತು. ಎರಡು ಗ್ರಾಮಗಳ ನಡುವೆ ರೈಲ್ವೆ ಮಾರ್ಗ ಹಾದು ಹೋಗಿದ್ದರಿಂದ ರೈಲ್ವೆ ಹಳಿಗಳ ಮೇಲೆ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ಆಕೆ ರೈಲ್ವೆ ಹಳಿ ದಾಟಲು ಪ್ರಯತ್ನಿಸಿದ್ದಾಳೆ. ಆದರೆ, ಮಹಿಳೆಯ ನಸೀಬು ಕೆಟ್ಟಿತ್ತು ಅನಿಸುತ್ತೆ, ಗೂಡ್ಸ್ ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿದೆ. ಸ್ಥಳದಲ್ಲಿದ್ದ ಜನರು ಕೂಗಿಕೊಂಡಿದ್ದಾರೆ, ರೈಲಿನ ಅಡಿ ಮಲಗುವಂತೆ ಸೂಚನೆ ನೀಡಿದ್ದಾರೆ. ತಡ ಮಾಡದೇ ರೈಲಿನ ಕೆಳಗೆ ಮಲಗಿ ತನ್ನ ಕಿವಿಗಳನ್ನು ಕೈಯಿಂದ ಮುಚ್ಚಿಕೊಂಡು ಜೀವ ರಕ್ಷಣೆಗಾಗಿ ದೇವರ ಪ್ರಾರ್ಥನೆ ಮಾಡಿದ್ದಾರೆ. ರೈಲು ಹೋದ ನಂತರ ಅಪಾಯದಿಂದ ಪಾರಾದ ಅಮ್ಮನನ್ನು ತಬ್ಬಿಕೊಂಡ ಮಗಳು ಭಾವುಕರಾದರು.
ರಾಜಾನುಕಂಟೆ ರೈಲ್ವೆ ಮಾರ್ಗ ಸಂಚಾರ ದಟ್ಟನೆಯಿಂದ ಕೂಡಿರುತ್ತದೆ. ದಿನಕ್ಕೆ ನೂರಾರು ರೈಲುಗಳು ಸಂಚರಿಸುತ್ತವೆ. ಅದ್ದಿಗಾನಹಳ್ಳಿಯ ಜನರು ರಾಜಾನುಕಂಟೆಗೆ ನಡೆದುಕೊಂಡು ಬರಬೇಕಾದರೆ ರೈಲು ಹಳಿಗಳನ್ನು ದಾಟಿಕೊಂಡೇ ಬರಬೇಕು. ರೈಲ್ವೆ ನಿಲ್ದಾಣದ ಸಮೀಪದಲ್ಲಿ ಯಾವುದಾದರೂ ಒಂದು ರೈಲು ನಿಂತಿರುತ್ತೆ. ಜನರು ಅನಿವಾರ್ಯವಾಗಿ ರೈಲಿನ ಕೆಳಗೆ ನುಗ್ಗಿ ರೈಲು ಹಳಿಗಳನ್ನು ದಾಟಬೇಕಾದ ಪರಿಸ್ಥಿತಿ ಇಲ್ಲಿದೆ.
ಇದನ್ನೂ ಓದಿ:ನೆಲಮಂಗಲ: ಪಾನಿಪೂರಿ ತಿಂದು ಹಣ ಕೊಡದೆ ಅಂಗಡಿ ಪುಡಿಗಟ್ಟಿದ ಯುವಕ ಸೆರೆ