ಸಚಿವ ನಿರಾಣಿ ಬೆಂಬಲಿಗರು ಕೊಟ್ಟ ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ ಮಹಿಳೆ - ವಿಡಿಯೋ
ಬಾಗಲಕೋಟೆ :ಚುನಾವಣೆ ಬರುತ್ತಿದ್ದಂತೆ ರಾಜಕೀಯ ಮುಖಂಡರು ಮತ ಸೆಳೆಯುವ ಉದ್ದೇಶದಿಂದ ಜನರಿಗೆ ಕೆಲ ಗಿಫ್ಟ್ ನೀಡುವುದು ಕಂಡುಬರುತ್ತದೆ. ಇದೇ ರೀತಿ ಬೀಳಗಿ ಕ್ಷೇತ್ರದಲ್ಲಿಯೂ ಸಹ ಸಚಿವ ಮುರುಗೇಶ್ ನಿರಾಣಿ ಅವರ ಬೆಂಬಲಿಗರು ಎನ್ನಲಾದ ಕೆಲವರು ಗಲಗಲಿ ಗ್ರಾಮದ ಮನೆಯೊಂದಕ್ಕೆ ತೆರಳಿ ಸಕ್ಕರೆ ಪಾಕೆಟ್ ನೀಡಲು ಮುಂದಾಗಿದ್ದಾರೆ. ಆಗ ಮಹಿಳೆಯೊಬ್ಬರು ಮನೆಯೊಳಗೆ ತೆಗೆದುಕೊಳ್ಳದೇ ಬೆಂಬಲಿಗರ ಮುಂದೆಯೇ ಬೇಡ ಎಂದು ಹೇಳಿ ತಿರಸ್ಕರಿಸಿದರು. ಇದರಿಂದ ಮುಜುಗರಕ್ಕೊಳಗಾದ ಬೆಂಬಲಿಗರು ಸಕ್ಕರೆ ಪ್ಯಾಕೆಟ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇಷ್ಟಾದರೂ ಜಗ್ಗದ ಮಹಿಳೆ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಎಂದಿದ್ದಾರೆ. ಅಲ್ಲದೆ, ಮನೆಯೊಳಗೆ ಒಯ್ದು ಇಟ್ಟಿದ್ದ ಸಕ್ಕರೆ ಪ್ಯಾಕೆಟ್ನ್ನು ಮಹಿಳೆ ಹೊರಗೆ ತಂದಿಟ್ಟಿದ್ದಾಳೆ. ಬಳಿಕ ಪ್ಯಾಕೆಟ್ ನೀಡಲು ಬಂದವರು ಹಾಗೆಯೇ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಪ್ರತಿಕ್ರಿಯಿಸಿ, "ಮುರುಗೇಶ್ ನಿರಾಣಿಯವರು ಸಕ್ಕರೆ ಕೊಟ್ಟಿದ್ದಾರೆ, ತೆಗೆದುಕೊಳ್ಳಿ ಎಂದು ಕೆಲವರು ನಮ್ಮ ಮನೆಗೆ ತಂದಿದ್ದರು. ಆದರೆ, ಕೊರೊನಾ ಸಮಯದಲ್ಲಿ ಯಾರೊಬ್ಬರೂ ನಮಗೆ ನೆರವಾಗಿಲ್ಲ. ಈಗ ಚುನಾವಣೆ ಸಮಯದಲ್ಲಿ ಮಾತ್ರ ಸಕ್ಕರೆ ಪ್ಯಾಕೆಟ್ ನೀಡಲು ಬಂದಿದ್ದಾರೆ. ಹೀಗಾಗಿ ಬೇಡ ಎಂದಿದ್ದೇವೆ. ಮತದಾನ ನಮ್ಮ ವೈಯಕ್ತಿಕ ಹಕ್ಕು" ಎಂದರು.
ರೈತ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, "ಬೀಳಗಿ ಮತಕ್ಷೇತ್ರದಲ್ಲಿ ಜನತೆಗೆ ಆಮಿಷ ತೋರಿಸುತ್ತಿದ್ದಾರೆ. ಮತ್ತೆ ಗೆಲ್ಲಬೇಕೆಂದು ಹೀಗೆಲ್ಲ ಮಾಡುತ್ತಿದ್ದಾರೆ, ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಸಕ್ಕರೆ ಹಂಚಿದ್ದರು. ಅದೇ ರೀತಿ ಗಲಗಲಿ ಗ್ರಾಮದಲ್ಲಿ ಮಹಿಳೆಯ ಮನೆಗೆ ತೆರಳಿ ಸಕ್ಕರೆ ಹಂಚಲು ಮುಂದಾಗಿದ್ದಾರೆ. ಆದರೆ ಮಹಿಳೆಯು ಸಕ್ಕರೆ ಪ್ಯಾಕೆಟ್ ಅನ್ನು ಮನೆಯ ಹೊರಗಿಟ್ಟು ತಿರಸ್ಕರಿಸಿದ್ದಾರೆ. ಈ ರೀತಿಯ ಕ್ರಮದಿಂದ ಮಾತ್ರವೇ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ" ಎಂದು ಹೇಳಿದರು.
ಇದನ್ನೂ ಓದಿ:ಮುಂದುವರಿದ ಪಂಚರತ್ನ ಯಾತ್ರೆ: ತರಕಾರಿ, ಅಡಕೆ ಹಾರ ಹಾಕಿ ಹೆಚ್ಡಿಕೆ ಬರಮಾಡಿಕೊಂಡ ಜನ