ಮೊಸಳೆ ದಾಳಿಗೆ ಮಹಿಳೆ ಬಲಿ: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ - ಒಡಿಶಾ
ಜಾಜ್‌ಪುರ:ಒಡಿಶಾದಲ್ಲಿ ಮಾನವ ಪ್ರಾಣಿ ಸಂಘರ್ಷ ನಿರಂತರವಾಗಿ ಮುಂದುವರೆದಿದೆ. ಬುಧವಾರ ಜಾಜ್‌ಪುರ ಜಿಲ್ಲೆಯ ಬ್ಯಾರಿ ಬ್ಲಾಕ್‌ನ ಪಾತಾಪುರ್ ಪ್ರದೇಶದಲ್ಲಿ ಮೊಸಳೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಜ್ಯೋತ್ಸ್ನಾ ಜೆನಾ ಮೃತರು.
ಮೂಲಗಳ ಪ್ರಕಾರ, ಜ್ಯೋತ್ಸ್ನಾ ಜೆನಾ ಎಂಬ ಮಹಿಳೆ ಬಟ್ಟೆ ತೊಳೆಯಲು ಬಿರುಪಾ ನದಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆಕೆ ಬಟ್ಟೆ ಒಗೆಯುವಾಗ ಮೊಸಳೆಯೊಂದು ಏಕಾಏಕಿ ದಾಳಿ ನಡೆಸಿ ನೀರಿಗೆ ಎಳೆದೊಯ್ದಿದೆ. ಇಡೀ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತೀವ್ರ ಹುಡುಕಾಟದ ನಂತರ, ಮಹಿಳೆಯ ವಿರೂಪಗೊಂಡ ಮೃತ ದೇಹ ನದಿಯ ದಡದಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಕೇಂದ್ರಪಾರದಲ್ಲಿ ಮೊಸಳೆ ದಾಳಿಯಿಂದ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ 5ನೇ ಜೀವ ಬಲಿಯಾದಂತಾಗಿದೆ. ಜು.28 ರಂದು ಬ್ರಾಹ್ಮಣಿ ನದಿಯಲ್ಲಿ ಮೊಸಳೆ ದಾಳಿಗೆ ಪಟ್ಟಮುಂಡೈ ಮೂಲದ ಅಮೂಲ್ಯ ದಾಸ್ ಎಂದು ಗುರುತಿಸಲಾದ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಜೂ. 29 ರಂದು, ಪಟ್ಟಮುಂಡೈನ ತರಡಿಪಾಲ್ ಘಗರಾಡಿಯಾ ಗ್ರಾಮದ ಬಳಿ ವ್ಯಕ್ತಿಯನ್ನು ಮೊಸಳೆ ನದಿಗೆ ಎಳೆದೊಯ್ದಿತ್ತು. ಅದೇ ರೀತಿ ಜೂ. 22 ರಂದು ರಾಜನಗರ ಬ್ಲಾಕ್‌ನಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿತ್ತು. ಬಳಿಕ ಜೂನ್ 14 ರಂದು ಅಪ್ರಾಪ್ತ ಬಾಲಕನನ್ನು ಮೊಸಳೆ ಎಳೆದೊಯ್ದು ತಿಂದು ಹಾಕಿತ್ತು.
ಇದನ್ನೂ ಓದಿ:ಬ್ರಾಹ್ಮಣಿ ನದಿಯಲ್ಲಿ ವ್ಯಕ್ತಿ ಎಳೆದೊಯ್ದ ಮೊಸಳೆ: ಮುಂದುವರೆದ ಶೋಧ ಕಾರ್ಯ