ಮೊಬೈಲ್ನಲ್ಲೇ ತಲಾಖ್ ನೀಡಿದ ಪತಿ.. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಪಾಟ್ನಾ (ಬಿಹಾರ) :ರಾಜಧಾನಿ ಪಾಟ್ನಾದ ಫುಲ್ವಾರಿಶರೀಫ್ ಎಂಬಲ್ಲಿ ಮದುವೆಯಾಗಿ 24 ವರ್ಷಗಳ ಬಳಿಕ ಪತಿ ತನ್ನ ಪತ್ನಿಗೆ ಮೊಬೈಲ್‌ನಲ್ಲಿ ತ್ರಿವಳಿ ತಲಾಖ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ, ಸಂತ್ರಸ್ತ ಮಹಿಳೆ ತನ್ನ ಪತಿಯ ವಿರುದ್ಧ ಫುಲ್ವಾರಿಶರೀಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಪ್ರತಿನಿತ್ಯ ಹೆಂಡತಿಗೆ ಹಲ್ಲೆ ನಡೆಸುತ್ತಿದ್ದ ಪತಿ : 24 ವರ್ಷಗಳ ಹಿಂದೆ ಪಾಟ್ನಾದ ಪುಲ್ವಾರಿ ಷರೀಫ್‌ನ ಮಹಿಳೆಗೆ ಆರಾ ಕೊಯಿಲ್ವಾರ್‌ನ ವ್ಯಕ್ತಿ ಜೊತೆ ಮದುವೆ ಆಗಿತ್ತು. ವಿವಾಹದ ನಂತರ ಇವರಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಕೆಲವು ವರ್ಷಗಳ ನಂತರ ಮಹಿಳೆ ಇಬ್ಬರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳಿಗೆ ಜನ್ಮ ನೀಡಿದ್ದರು. ಆದರೆ, ಮದುವೆಯಾದ ಕೆಲವು ದಿನಗಳ ನಂತರ ಪತಿ ತನ್ನ ಪತ್ನಿಯ ಮೇಲೆ ನಿರಂತರವಾಗಿ ಹಲ್ಲೆಗೆ ಮುಂದಾಗಿದ್ದಾನೆ. ಈ ಜಗಳ ಮುಂದೆ ವಿಕೋಪಕ್ಕೆ ಹೋಗಿದೆ. ನಂತರ ಪತಿ ಮತ್ತೊಂದು ಮದುವೆಯಾಗಿ ದೂರುದಾರ ಮಹಿಳೆಯಿಂದ ವಿಚ್ಛೇದನ ಪಡೆದಿದ್ದಾನೆ.
ಮೊಬೈಲ್ನಲ್ಲಿಯೇ ತಲಾಖ್ ನೀಡಿದ ಪತಿ: 'ನನ್ನ ಪತಿ ನನಗೆ ನಿತ್ಯ ಹೊಡೆಯುತ್ತಿದ್ದರು. ಅವರು ನನ್ನ ಹೊರತಾಗಿ ಇನ್ನಿಬ್ಬರನ್ನು ಮದುವೆಯಾಗಿದ್ದಾರೆ. ಅವರಿಗೂ ವಿಚ್ಛೇದನ ನೀಡಿದ್ದಾರೆ. ಇತ್ತೀಚೆಗೆ ಮತ್ತೊಬ್ಬಳನ್ನು ಮದುವೆಯಾಗಿದ್ದಾರೆ. ಮಗುವಿನ ಪೋಷಣೆಗೆ ವೆಚ್ಚ ಕೇಳಿದಾಗ ಅವರು ವಿಚ್ಛೇದನ ನೀಡಿದರು. ಮೊಬೈಲ್‌ನಲ್ಲಿ ಮೂರು ಬಾರಿ ತಲಾಖ್ ತಲಾಖ್ ಎಂದು ಹೇಳಿ ನಾವು ಸ್ವತಂತ್ರರು ಎಂದು ಘೋಷಿಸಿದರು. ಈಗ ನಾನು ಅವರ ವಿರುದ್ಧ ಫುಲ್ವಾರಿಶರೀಫ್ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದೇನೆ' ಎಂದು ಸಂತ್ರಸ್ತ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
'ಮಹಿಳೆಯೊಬ್ಬರು ಪತಿಯಿಂದ ಮೊಬೈಲ್‌ನಲ್ಲಿ ವಿಚ್ಛೇದನ ಪಡೆದಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಫುಲ್ವಾರಿಶರೀಫ್ ಪೊಲೀಸ್ ಠಾಣಾಧಿಕಾರಿ ಸಫೀರ್ ಆಲಂ ಅವರು ಹೇಳಿದ್ದಾರೆ.
ಇದನ್ನೂ ಓದಿ :ತ್ರಿವಳಿ ತಲಾಖ್.. ಹಿಂದೂ ಪದ್ಧತಿಯಂತೆ 'ಪ್ರೇಮ್' ಮದುವೆಯಾದ ಮುಸ್ಲಿಂ ಮಹಿಳೆ!