ಮಳೆ ನೀರಿನಲ್ಲಿ ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ಮಹಿಳೆಯ ರಕ್ಷಣೆ- ವಿಡಿಯೋ
ಪಂಚಕುಲ (ಹರಿಯಾಣ): ಹರಿಯಾಣದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕಾರೊಂದು ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅದರಲ್ಲಿದ್ದ ಮಹಿಳೆಯನ್ನು ರಕ್ಷಿಸಿರುವ ಘಟನೆ ಪಂಚಕುಲ ಜಿಲ್ಲೆಯ ಖಡಕ್ ಮಂಗೋಲಿ ಬಳಿ ನಡೆದಿದೆ.
ಪೂಜೆ ಸಲ್ಲಿಸಲೆಂದು ತಾಯಿ ಮಗಳಿಬ್ಬರು ಇಲ್ಲಿನ ನದಿ ತೀರಕ್ಕೆ ಬಂದಿದ್ದರು. ಈ ವೇಳೆ ಕಾರನ್ನು ನದಿ ದಡದಲ್ಲಿ ನಿಲ್ಲಿಸಿದ್ದು, ನದಿಯಲ್ಲಿ ನೀರಿನ ಪ್ರಮಾಣ ದಿಢೀರ್ ಏರಿಕೆಯಾಗಿದೆ. ನೋಡು ನೋಡುತ್ತಿದ್ದಂತೆಯೇ ನದಿ ದಡದಲ್ಲಿದ್ದ ಕಾರಿನ ಸಮೇತ ಮಹಿಳೆಯು ನೀರಿನ ಪ್ರವಾಹಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆಗಳು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ. ಪ್ರವಾಹದಲ್ಲಿ ಕಾರಿನೊಳಗೆ ಸಿಲುಕಿದ್ದ ಮಹಿಳೆಯನ್ನು ಹೊರಕ್ಕೆ ಕರೆ ತರಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಸಾಕಷ್ಟು ಪ್ರಯತ್ನದ ಬಳಿಕ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೇನ್ ಸಹಾಯದಿಂದ ಕಾರನ್ನು ನದಿಯಿಂದ ಹೊರತೆಗೆಯುವ ಕಾರ್ಯ ನಡೆದಿದೆ.
ಇಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ನದಿಯಲ್ಲಿ ನೀರು ದಿಢೀರ್ ಏರಿಕೆ ಕಂಡು ಕಾರು ಮುಳುಗಡೆಯಾಗಿದೆ ಎಂದು ಹೇಳಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ :Assam flood: ಅಸ್ಸೋಂನಲ್ಲಿ ಭಾರಿ ಮಳೆ, ಪ್ರವಾಹ: 4 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ- ವಿಡಿಯೋ