ಕಾರವಾರ: ಮನೆಯೊಳಗೆ ಅಪರೂಪದ ತೋಳ ಹಾವು ಪತ್ತೆ, ರಕ್ಷಣೆ - ಉತ್ತರಕನ್ನಡದಲ್ಲಿ ಅಪರೂಪದ ಹಾವು ಪತ್ತೆ
Published : Oct 18, 2023, 10:19 PM IST
ಕಾರವಾರ: ನಗರದ ಆಶ್ರಮ ರಸ್ತೆಯ ಮನೆಯೊಂದರಲ್ಲಿ ಅಪರೂಪದ ತೋಳ ಹಾವು (wolf snake) ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು. ಮನೆಯ ಹೊರಗಿನ ಗೋಡೆಯ ಮೇಲೆ ಹರಿಯುತ್ತಿದ್ದ ಕಾಳಿಂಗ ಸರ್ಪದ ಮರಿಯಂತಿರುವ ಕಪ್ಪು ಬಣ್ಣದ ಹಾವು ಕಂಡ ಮನೆಯವರು ಆತಂಕಗೊಂಡು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಎಚ್ಚರಿಕೆಯಿಂದ ಹಾವನ್ನು ಡಬ್ಬಿಯಲ್ಲಿ ಸೆರೆಹಿಡಿದರು.
ತೋಳದ ಹಲ್ಲಿನಂತೆ ಹಲ್ಲುಗಳನ್ನು ಹೊಂದಿರುವುದರಿಂದ ಇವುಗಳನ್ನು ಊಲ್ಫ್ ಸ್ನೇಕ್ಸ್ ಎಂದು ಕರೆಯಲಾಗುತ್ತದೆ. ಒಂದರಿಂದ ಒಂದೂವರೆ ಅಡಿ ಮಾತ್ರ ಬೆಳೆಯುವ ಇವುಗಳು ಕಾಂಪೌಂಡ್ ಗೋಡೆಯ ಸಂಧಿಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಇವು ನಿಶಾಚರಿಗಳಾದ್ದು ವಿಷಕಾರಿಯಲ್ಲ. ಹೀಗಿದ್ದರೂ ದೇಹದ ಮೇಲಿನ ಬಿಳಿಯ ಪಟ್ಟಿಯಂತಹ ರಚನೆಯಿಂದ ವಿಷಕಾರಿಯಂತೆ ಕಂಡುಬರುತ್ತವೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಹಂಪಿಯ ವಿಜಯ ವಿಠ್ಠಲ ದೇಗುಲದ ಆವರಣದಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆಯಾಗಿತ್ತು. ಕಮಲಾಪುರದ ಉರಗ ರಕ್ಷಕ ಜಿ.ಬಿ.ಮಲ್ಲಿಕಾರ್ಜುನ ಸ್ಥಳಕ್ಕೆ ಬಂದು ಹಾವು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದರು.
ಇದನ್ನೂ ಓದಿ:ಕಾರವಾರ: ಹತ್ತಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ!- ವಿಡಿಯೋ