ಆಹಾರ ಅರಸಿ ನಾಡಿಗೆ ಬಂದ ಕಾಡಾನೆ, ಸಿಮೆಂಟ್ ಟ್ಯಾಂಕ್‌ಗೆ ಬಿದ್ದು ಸಾವು
ಕೊಡಗು: ಆಹಾರ ಅರಸಿ ಅರಣ್ಯದಿಂದ ನಾಡಿಗೆ ಬಂದ ಕಾಡಾನೆಯೊಂದು ಕಾಫಿತೋಟದಲ್ಲಿ ಪಾಳು ಬಿದ್ದಿದ್ದ ಸಿಮೆಂಟ್ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿ ಎಸ್ಟೇಟ್‌ನಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುತ್ತಿರುವ ಕಾಡಾನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ಅಲ್ಲದೇ, ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ದಾಳಿ ಮಾಡುತ್ತಿವೆ.
ಆಹಾರಕ್ಕಾಗಿ ಬಂದ ಕಾಡಾನೆಗಳು ಕಂದಕಕ್ಕೆ, ಇಲ್ಲದಿದ್ದರೆ ವಿದ್ಯುತ್ ತಂತಿ ತಗುಲಿಸಿಕೊಂಡು ಸಾವನ್ನಪ್ಪುತ್ತಿರುವ ಘಟನೆಗಳು ಹಲವು ಬಾರಿ ನಡೆದಿವೆ. ಶುಕ್ರವಾರ ತಡರಾತ್ರಿ ಕೂಡ ಇಂತಹದೇ ಘಟನೆ ನಡೆದಿದೆ. ರಾತ್ರಿ ಕಾಫಿ ತೋಟಕ್ಕೆ ನುಗ್ಗಿದ್ದ ಕಾಡಾನೆ, ಊರಿನ ಸಮೀಪ ಬಂದಿದೆ. ಎರನೀರು ಗುಂಡಿ ಕಾಫಿತೋಟದಲ್ಲಿ ಪಾಳು ಬಿದ್ದಿದ್ದ ಟ್ಯಾಂಕ್‌ಗೆ ಬಿದ್ದು, ಮೇಲೆ ಬರಲು ಸಾಧ್ಯವಾಗದೇ ಗುಂಡಿಯಲ್ಲೇ ಒದ್ದಾಡಿ ಸಾವನ್ನಪ್ಪಿದೆ. ಸ್ಥಳಕ್ಕೆ ಶನಿವಾರಸಂತೆ ಭಾಗದ ಆರಣ್ಯ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೆಸಿಬಿ ಸಹಾಯದಿಂದ ಮೃತ ಆನೆಯನ್ನು ಮೇಲಕ್ಕೆ ಎತ್ತಿದ್ದಾರೆ.
ಇದನ್ನೂ ಓದಿ:ಮುಗಿಯದ ಪ್ರಾಣಿ - ಮಾನವ ಸಂಘರ್ಷ: ಮಲೆನಾಡಿಗರಿಗೆ ಕಾಡಾನೆ ಜೊತೆ ಹುಲಿ ಕಾಟ