ಬೆಳ್ತಂಗಡಿ: ಕಾರಿನ ಮೇಲೆ ಕಾಡಾನೆ ದಾಳಿ; ಓರ್ವನಿಗೆ ಗಾಯ-ವಿಡಿಯೋ
Published : Nov 28, 2023, 7:27 AM IST
ಬೆಳ್ತಂಗಡಿ:ನೆರಿಯ ಸಮೀಪದ ತೋಟತ್ತಾಡಿಯ ಬಯಲು ಬಸ್ತಿ ಸಮೀಪ ಆನೆಯೊಂದು ರಸ್ತೆಯಲ್ಲಿ ಪ್ರಯಾಣಿಕರಿದ್ದ ಕಾರಿಗೆ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಆನೆ ಬರುತ್ತಿರುವುದನ್ನು ಕಂಡ ಚಾಲಕ ಆತಂಕಗೊಂಡು ಕಾರು ನಿಲ್ಲಿಸಿದ್ದಾರೆ. ನಿಂತ ಕಾರಿನ ಸಮೀಪ ಬಂದ ಆನೆ ಕಾರನ್ನು ಎತ್ತಿ ಹಾನಿಗೊಳಿಸಿದೆ. ಕಾರಿನಲ್ಲಿ ಮಗು ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದರು. ಓರ್ವ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಇದಕ್ಕೂ ಮೊದಲು ಈ ಪರಿಸರದಲ್ಲಿ ಓಡಾಟ ನಡೆಸಿದ್ದ ಆನೆ ಮನೆಯಂಗಳಕ್ಕೂ ಹೋಗಿತ್ತು. ಕಾರಿಗೆ ಹಾನಿ ಮಾಡುವ ಮುನ್ನ ರಸ್ತೆ ಬದಿ ಇದ್ದ ಮನೆಯೊಂದರ ಗೇಟು ಮುರಿಯಲು ಯತ್ನಿಸಿದೆ. ಸುತ್ತಮುತ್ತಲ ಮನೆಯವರು ಕಿರುಚಿದ್ದು ಆನೆ ಮತ್ತೆ ರಸ್ತೆಗೆ ಬಂದಿತ್ತು. ರಸ್ತೆಯಲ್ಲಿ ಕಾರನ್ನು ಎತ್ತಿ ಹಾಕಿದ ಬಳಿಕ ಸಮೀಪದ ರಬ್ಬರ್ ತೋಟದಲ್ಲಿ ಕಾಣಿಸಿಕೊಂಡಿದೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಿದರು. ಘಟನಾ ಸ್ಥಳಕ್ಕೆ ಡಿಎಫ್ಒ ಸೇರಿದಂತೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಕೊಡಗು: ಮನೆ ಮುಂದೆ ಬಂದು ಕಾಡಾನೆಗಳ ದಾಂಧಲೆ - ವಿಡಿಯೋ ನೋಡಿ