ದುಬಾರೆ ಆನೆ ಶಿಬಿರದ ಮೇಲೆ ಕಾಡಾನೆ ದಾಳಿ.. ಸಾಕಾನೆ ಗೋಪಿಗೆ ಗಾಯ.. ಪ್ರವಾಸಿಗರಿಗೆ ನಿಷೇಧ - ದುಬಾರೆ ಸಾಕಾನೆ ಶಿಬಿರದ ಮೇಲೆ ಕಾಡಾನೆ ದಾಳಿ
ಮಡಿಕೇರಿ: ದುಬಾರೆ ಸಾಕಾನೆ ಶಿಬಿರಕ್ಕೆ ಮದವೇರಿದ ಕಾಡಾನೆ ತಡರಾತ್ರಿ ದಾಳಿ ಮಾಡಿದ ಪರಿಣಾಮ ಶಿಬಿರದ ಸಾಕಾನೆ ಗೋಪಿ ಗಾಯಗೊಂಡಿದ್ದು, ವನ್ಯಜೀವಿ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ. ಮಾಲ್ದಾರೆ ಮೀಸಲು ಅರಣ್ಯದಿಂದ ಬಂದಿರುವ ಕಾಡಾನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಮದ ಬಂದಿರುವ ಕಾಡಾನೆ, ಶಿಬಿರದ ಬಳಿಯೇ ಇರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ತಡ ರಾತ್ರಿ ಆನೆಯ ಶಬ್ದ ಕೇಳಿ ಶಿಬಿರದ ಮಾವುತರು, ಕಾವಾಡಿಗರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವನ್ಯಜೀವಿ ತಜ್ಞ ಡಾ, ಚಿಟ್ಟಿಯಪ್ಪ ಅವರ ನೇತೃತ್ವದ ತಂಡ ತೀವ್ರ ಗಾಯಗೊಂಡ ಶಿಬಿರದ ಗೋಪಿ ಸಾಕಾನೆಗೆ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.