ಕರ್ನಾಟಕದ ಜನ ಮೋದಿ ಜೊತೆಗಿದ್ದಾರೆ, 150 ಸೀಟು ಗೆದ್ದೇ ಗೆಲ್ತೇವೆ: ಧರ್ಮೇಂದ್ರ ಪ್ರಧಾನ್ - election updates
ದೇವನಹಳ್ಳಿ: "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲಲಿದೆ" ಎಂದು ಕೇಂದ್ರ ಸಚಿವ ಮತ್ತು ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ವಿಶ್ವಾಸದಿಂದ ನುಡಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯವು ಹಲವು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ. ಇಲ್ಲಿನ ಜನರು ಪ್ರಧಾನಿ ನರೇಂದ್ರ ಮೋದಿಜಿ ಅವರ ಜೊತೆಗಿದ್ದಾರೆ ಎಂಬ ವಿಶ್ವಾಸ ನನಗಿದೆ. ಮೋದಿಜಿ ಅವರ ಸರಕಾರ, ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಾಡಿದ ಸಾಧನೆಯ ಹಿನ್ನೆಲೆ ನಮಗಿದೆ" ಎಂದರು.
"ಪ್ರಧಾನಿ ಈಗಾಗಲೇ ಕೆಲವು ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದು, ಇನ್ನಷ್ಟು ಬಾರಿ ಬರಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅವರೆಲ್ಲರೂ ಪಕ್ಷಕ್ಕಾಗಿ ಪ್ರಚಾರ ಮಾಡಲಿದ್ದಾರೆ. ಶೀಘ್ರದಲ್ಲೇ ಪ್ರಚಾರ ಯಾತ್ರೆಗಳನ್ನು ಆರಂಭಿಸಲಾಗುತ್ತದೆ" ಎಂದು ತಿಳಿಸಿದರು.
ಕೇಂದ್ರ ಸಚಿವ ಮತ್ತು ಕರ್ನಾಟಕ ಚುನಾವಣಾ ಸಹ ಉಸ್ತುವಾರಿ ಮಾನ್‍ಸುಖ್ ಮಾಂಡವೀಯ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಮುಖ್ಯ ವಕ್ತಾರ ಮಹೇಶ್ ಎಂ.ಜಿ ಇದ್ದರು.
ಇದನ್ನೂ ಓದಿ:ಸಿ.ಟಿ. ರವಿ ವಾದ, ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟುಗುಣಕ್ಕೆ ತಕ್ಕ ಹಾಗಿದೆ: ಸಿದ್ದರಾಮಯ್ಯ ಗರಂ