ಎಲ್ಲ ಶಾಸಕರೊಂದಿಗೆ 4-5 ಗಂಟೆಗಳ ಕಾಲ ಚರ್ಚೆ ನಡೆಸಿ ಅಭಿಪ್ರಾಯ ತೆಗೆದುಕೊಂಡಿದ್ದೇವೆ: ಭನ್ವರ್ ಜಿತೇಂದ್ರ ಸಿಂಗ್ - Karnataka Next Chief Minister
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ಪಕ್ಷ, ಇದೀಗ ಮುಖ್ಯಮಂತ್ರಿ ವಿಚಾರದ ಹಿನ್ನೆಲೆ ದೆಹಲಿಯ ವರಿಷ್ಠರ ಬಳಿ ತೆರಳಿದೆ. ಮುಂದಿನ ಮುಖ್ಯಮಂತ್ರಿ ಪಟ್ಟಿಯಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದ್ದು, ಈ ಇಬ್ಬರಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕೆಲವರು ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿದರೆ, ಇನ್ನು ಕೆಲವರು ಡಿಕೆ ಶಿವಕುಮಾರ್ಗೆ ಅವಕಾಶ ಮಾಡಿಕೊಂಡುವಂತೆ ಮನವಿ ಮಾಡುತ್ತಿದ್ದಾರೆ. ಈ ಮಧ್ಯೆ ನಿನ್ನೆ ದೆಹಲಿಯಿಂದ ಆಗಮಿಸಿದ್ದ ಮೂವರು ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಇಂದು ಮಧ್ಯಾಹ್ನ ನವದೆಹಲಿಗೆ ಆಗಮಿಸಿದರು. ವೀಕ್ಷಕರಲ್ಲಿ ಒಬ್ಬರಾದ ಭನ್ವರ್ ಜಿತೇಂದ್ರ ಸಿಂಗ್ ಈ ಬಗ್ಗೆ ಮಾತನಾಡಿ, ನಿನ್ನೆ ರಾತ್ರಿ ಎಲ್ಲ ಶಾಸಕರೊಂದಿಗೆ 4-5 ಗಂಟೆಗಳ ಕಾಲ ಚರ್ಚೆ ನಡೆಸಿ ಅವರ ಅಭಿಪ್ರಾಯ ತೆಗೆದುಕೊಂಡಿದ್ದೇವೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸುತ್ತೇವೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂದು ಸದ್ಯದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬವಾರಿಯಾ ಕೂಡ ವೀಕ್ಷಕರ ತಂಡದಲ್ಲಿದ್ದು ಸದ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದತ್ತ ತೆರಳಿದೆ. ಶೀಘ್ರದಲ್ಲೇ ಈ ತಂಡ ಅಲ್ಲಿ ಅವರಿಗೆ ವರದಿ ಸಲ್ಲಿಸಲಿದೆ.
ಇದನ್ನೂ ಓದಿ: 135 ಸ್ಥಾನಗಳೇ ನನಗೆ ರಾಜ್ಯದ ಜನರು ನೀಡಿದ ಜನ್ಮದಿನದ ಬಹುದೊಡ್ಡ ಗಿಫ್ಟ್: ಡಿ.ಕೆ.ಶಿವಕುಮಾರ್