ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದು ಜೆಡಿಎಸ್ ಮರೆಯಬಾರದು ಎಂದ ಡಿಕೆಶಿ.. ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದ ಹೆಚ್ಡಿಕೆ! - ಹೆಚ್ಡಿ ಕುಮಾರಸ್ವಾಮಿ
ನವದೆಹಲಿ/ಬೆಂಗಳೂರು:ಹೊಸ ಸಂಸತ್ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಷಯ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಪರಸ್ಪರ ಟೀಕೆ ವ್ಯಕ್ತವಾಗಿದೆ. ರಾಷ್ಟ್ರಪತಿ ಬದಲಿಗೆ ಪ್ರಧಾನಿ ಭವನ ಉದ್ಘಾಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿ 19 ಪ್ರಮುಖ ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಮತ್ತೊಂದೆಡೆ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸಂಸತ್ ಭವನ ಉದ್ಘಾಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಇದೇ ವಿಚಾರ ಈಗ ಎರಡೂ ಪಕ್ಷಗಳ ನಡುವೆ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳೇ ಉದ್ಘಾಟಿಸಬೇಕು. ಪ್ರಧಾನಿ ವ್ಯವಸ್ಥೆಯ ಒಂದು ಭಾಗ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಸಂಸತ್ ಭವನದ ಶಂಕುಸ್ಥಾಪನೆಗೂ ರಾಷ್ಟ್ರಪತಿಗಳು ಇರಲಿಲ್ಲ ಎಂಬುವುದು ಅಚ್ಚರಿ. ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ನವರು ರಾಷ್ಟ್ರಪತಿ ಮತ್ತು ಆದಿವಾಸಿಗಳಿಗೆ ಅನುಮಾನ ಮಾಡುತ್ತಿದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಡಿಕೆಶಿ, ರಾಷ್ಟ್ರಪತಿ ಚುನಾವಣೆ ನಡೆದಾಗ ತಮ್ಮ ಪಕ್ಷದವರು ಮತದಾನ ಬಹಿಷ್ಕರಿಸಿದ್ದನ್ನು ಕುಮಾರಸ್ವಾಮಿ ಮರೆಯಬಾರದು ಎಂದು ತಿರುಗೇಟು ನೀಡಿದರು.
ಮತ್ತೊಂದೆಡೆ, ದೇವೇಗೌಡರು ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಕಾಂಗ್ರೆಸ್ನವರು ಪ್ರಶ್ನಿಸುತ್ತಿದ್ದಾರೆ ಎಂಬ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ನಮ್ಮದೇ ಆದ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಯಾಕೆ ಕಾಂಗ್ರೆಸ್ಅನ್ನು ಅನುಸರಿಸಬೇಕು?. ಅದರ ಅಗತ್ಯ ನಮಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿಯವರಿಂದ ಸಂಸತ್ ಭವನ ಉದ್ಘಾಟನೆ ಕೋರಿದ್ದ ಪಿಐಎಲ್ ತಿರಸ್ಕೃತ